ಬಂಟ್ವಾಳ, ನ. 16 (DaijiworldNews/SM) : ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿಯಲ್ಲಿ ತೊಡಗಿಸಿಕೊಂಡ ಕಾಂಗ್ರೇಸ್ ಪಕ್ಷ ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರದ ದಿಂದಲೂ ಟೆಕೆಟ್ ಅಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಈ ಗಾಗಲೇ ಟಿಕೆಟ್ ಅಕಾಂಕ್ಷಿಗಳ ಅರ್ಜಿ ಸಲ್ಲಿಕೆಯ ಭರಾಟೆ ಜೋರಾಗಿ ನಡೆಯುತ್ತಿದ್ದು,ಜಿಲ್ಲೆಯಲ್ಲಿ ರಾಜಕೀಯ ತವರೂರು ಆಗಿರುವ ಬಂಟ್ವಾಳದಿಂದಲೂ ಕಾಂಗ್ರೇಸ್ ಟಿಕೆಟ್ ಅಕಾಂಕ್ಷಿಗಳಿಂದ ಕೆಪಿಸಿಸಿ ಗೆ ಅರ್ಜಿ ಸಲ್ಲಿಕೆಯಾಗಿದ್ದು, ಮಾಜಿ ಸಚಿವ ಕಾಂಗ್ರೆಸ್ ಪಾಳಯದಲ್ಲಿ ಹಿರಿಯಣ್ಣ ನಾಗಿರುವ ಬಂಟ್ವಾಳ ಕ್ಷೇತ್ರದ ಜೊತೆಗೆ ರಾಜ್ಯಮಟ್ಟದ ಪ್ರಭಾವಿ ನಾಯಕ ಬಿ.ರಮಾನಾಥ ರೈ ಅವರು ಅರ್ಜಿ ಸಲ್ಲಿಸಿದ್ದಾರೆ.
ಇವರ ಜೊತೆಯಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರ ದಿಂದ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದ ರಾಕೇಶ್ ಮಲ್ಲಿ ಹಾಗೂ ಯುವ ನಾಯಕ, ಸೌಮ್ಯವಾದಿ , ಯುವ ನ್ಯಾಯವಾದಿ, ಮೇನಾಲ ಗುತ್ತು ಅಶ್ವನಿ ಕುಮಾರ್ ರೈ ಅವರು ಕೂಡ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಇವರ ಜೊತೆಗೆ ಬಂಟ್ವಾಳ ಕ್ಷೇತ್ರದ ಯುವ ನಾಯಕ , ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಅವರು ಸುರತ್ಕಲ್ ಕ್ಷೇತ್ರದಿಂದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಜಿ.ಪಂ.ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಅವರು ಪುತ್ತೂರು ಕ್ಷೇತ್ರದಿಂದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.