Karavali
ಉಡುಪಿ: ನ. 18ರಿಂದ 20ರವರೆಗೆ ಮಾಹೆಯ 30ನೇ ಘಟಿಕೋತ್ಸವ, 5 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
- Wed, Nov 16 2022 05:25:48 PM
-
ಉಡುಪಿ, ನ 16 (DaijiworldNews/DB): ಭಾರತದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ರಾಷ್ಟ್ರೀಯ ಶಿಕ್ಷಣ ನೀತಿ 2020ರ ವಿವಿಧ ವಿಚಾರಗಳನ್ನು ಚರ್ಚಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಬುಧವಾರ ಮಾಹಿತಿ ನೀಡಿದ ಮಾಹೆಯ ಪ್ರೊ ಚಾನ್ಸೆಲರ್ ಡಾ. ಎಚ್.ಎಸ್. ಬಲ್ಲಾಳ್ ಅವರು, ಮಾಹೆಯ 30ನೇ ಘಟಿಕೋತ್ಸವ ನವೆಂಬರ್ 18, 19 ಮತ್ತು 20ರಂದು ನಡೆಯಲಿದ್ದು, ಶೈಕ್ಷಣಿಕ ಕ್ಷೇತ್ರದ ಅನೇಕ ಸಾಧ್ಯತೆಗಳ ಕುರಿತು ಈ ವೇಳೆ ಚರ್ಚೆಗಳು ನಡೆಯಲಿವೆ. ಸುಮಾರು ಐದು ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
ನವೆಂಬರ್ 18ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಮತ್ತು ಪಿವಿಎಸ್ಎಂ, ಲೆಫ್ಟಿನೆಂಟ್ ಜನರಲ್ ಮಾಧುರಿ ಕಾನಿಟ್ಕರ್, ಪಿವಿಎಸ್ಎಂ, ಎವಿಎಸ್ಎಂ (ನಿವೃತ್ತ), ವೈಸ್ ಚಾನ್ಸೆಲರ್, ಎಂಯುಎಸ್ಎಚ್, ನಾಸಿಕ್ ಅವರು ಗೌರವಾನ್ವಿತ ಅತಿಥಿಗಳಾಗಿರುತ್ತಾರೆ. ನವೆಂಬರ್ 19ರಂದು ಭಾರತ ಸರ್ಕಾರದ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ. ಜಿ. ಸತೀಶ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನವೆಂಬರ್ 20ರಂದು ನಡೆಯುವ ಕಾರ್ಯಕ್ರಮದಲ್ಲಿ ಆಕ್ಸಿಸ್ ಬ್ಯಾಂಕ್ನ ಎಂ.ಡಿ. ಹಾಗೂ ಸಿಇಒ ಅಮಿತಾಭ್ ಚೌಧರಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದವರು ತಿಳಿಸಿದರು.
ಮಾಹೆಯು ತನ್ನ ವಿಶಾಲವಾದ ಹಿನ್ನೆಲೆಯೊಂದಿಗೆ ಹೊಸ ಆವಿಷ್ಕಾರಗಳು ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸುವ ಪರಿಕಲ್ಪನೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಹಾಗೂ ಅದರ ನಿರೀಕ್ಷಿತ ಫಲಿತಾಂಶಗಳ ಕುರಿತು ವಿಸ್ತೃತ ಚರ್ಚೆಯು ನಡೆಯಲಿದೆ ಎಂದು ಅವರು ವಿವರಿಸಿದರು.
ಈಗಾಗಲೇ ಮಾಹೆಗೆ ನ್ಯಾಕ್ನಿಂದ ಎ++ ಗ್ರೇಡ್ ಲಭ್ಯವಾಗಿದೆ. ಅಲ್ಲದೆ ಸಂಸ್ಥೆಯ ಅನೇಕ ತಾಂತ್ರಿಕ ಯೋಜನೆಗಳನ್ನು ಎನ್ಬಿಎ ಅಂಗೀಕರಿಸಿದೆ. ಮಾಹೆಯು ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಧಿಸಲು ನಡೆಸುತ್ತಿರುವ ಪ್ರಯತ್ನಗಳ ಕುರಿತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಶ್ಲಾಘನೆ ವ್ಯಕ್ತವಾಗಿವೆ. ಭಾರತ ಸರ್ಕಾರದ ಶೈಕ್ಷಣಿಕ ಸಚಿವಾಲಯದ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ರ್ಯಾಂಕಿಂಗ್ ಫ್ರೇಮ್ವರ್ಕ್ (ಎನ್ಐಆರ್ಎಫ್)-2022 ರ ಪ್ರಕಾರ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಮಾಹೆಗೆ ಏಳನೇ ಸ್ಥಾನ ದೊರೆತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಉತ್ತಮ ಶ್ರೇಯಾಂಕ ಪಡೆಯಲು ಮಾಹೆಯು ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಡಾ. ಎಚ್.ಎಸ್. ಬಲ್ಲಾಳ್ ತಿಳಿಸಿದರು.
ನಮ್ಮಸಂಸ್ಥಾಪಕರಾದ ಡಾ. ಟಿ.ಎಂ.ಎ ಪೈ ಅವರು ದೂರದೃಷ್ಟಿಯುಳ್ಳವರಾಗಿದ್ದರು. ಅವರು ವೈದ್ಯರು, ಬ್ಯಾಂಕರ್ ಮತ್ತು ಶಿಕ್ಷಣ ತಜ್ಞರಾಗಿದ್ದರು. 1942ರಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ್ನು 1860 ರ ಸೊಸೈಟೀಸ್ ರಿಜಿಸ್ಟ್ರೇಶನ್ ಆಕ್ಟ್ ಅಡಿಯಲ್ಲಿ ಸ್ಥಾಪಿಸಿದರು ಮತ್ತು ಆಸಕ್ತರಿಗೆ ತಾಂತ್ರಿಕ ಮತ್ತು ವಾಣಿಜ್ಯ ಶಿಕ್ಷಣ ಲಭ್ಯವಾಗುವಂತೆ ಮಾಡಿದರು. ಎಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದವರಿಗೆ ಕೌಶಲ ತರಬೇತಿ ನೀಡುವ ಉದ್ದೇಶದಿಂದ ಮರದ ಕೆಲಸ, ಪ್ಲಂಬಿಂಗ್, ಎಲೆಕ್ಟ್ರಿಷಿಯನ್, ಮೇಸ್ತ್ರಿ ಕೆಲಸಗಳನ್ನು ಕಲಿಸಲು ವ್ಯವಸ್ಥೆ ಮಾಡಿದರು. ವೈದ್ಯಕೀಯ ಕ್ಷೇತ್ರದಲ್ಲಿ ತರಬೇತಿ ಪಡೆಯಲು ಬೇಕಾದ ವೃತ್ತಿಪರ ಕಾಲೇಜುಗಳನ್ನು ಆರಂಭಿಸಿದರು. ದೇಶದ ಮೊತ್ತ ಮೊದಲ ಸ್ವಯಂ ಹಣಕಾಸು ಹೂಡಿಕೆ ಮಾಡಿದ ಖಾಸಗಿ ವೈದ್ಯಕೀಯ ಕಾಲೇಜನ್ನು 1953ರಲ್ಲಿ ಆರಂಭಿಸಿದರು. ಅವರ ಈ ಪ್ರಯತ್ನಕ್ಕೆ ಅವರದ್ದೇ ಸ್ನೇಹಿತರು ಸೇರಿದಂತೆ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಅವರು ತಮ್ಮ ಉದ್ದೇಶದ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ಇದೇ ವೇಳೆಗೆ ಅವರು ಎಂಜಿನಿಯರಿಂಗ್ ಡೆಂಟಿಸ್ಟ್ರಿ, ಫಾರ್ಮಸಿ, ಆರ್ಕಿಟೆಕ್ಟ್, ಕಾನೂನು, ಶಿಕ್ಷಣ ಮತ್ತು ಆಡಳಿತ ಸುಧಾರಣೆ ಕಲಿಕೆಯ ಮ್ಯಾನೇಜ್ ಮೆಂಟ್ ಕಾಲೇಜುಗಳನ್ನು ಆರಂಭಿಸಿದರು ಎಂದು ವಿವರಿಸಿದರು.
ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಾಹೆಯ ಪ್ರಮುಖ ಸಂಸ್ಥೆಯಾಗಿದೆ. 1953ರಲ್ಲಿ ಸಂಸ್ಥಾಪಕ ದಿವಂಗತ ಡಾ. ಟಿಎಂಎ ಪೈ ಅವರು ಪ್ರಾರಂಭಿಸಿದ ಮೊದಲ ಸ್ವ- ಹಣಕಾಸು ಹೂಡಿಕೆಯ ವೈದ್ಯಕೀಯ ಕಾಲೇಜು ಇದಾಗಿದ್ದು, ದೇಶದಲ್ಲಿ ಇದು 29ನೇ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆ ಪಡೆದಿದೆ. ಪ್ರಸ್ತುತ ದೇಶದಲ್ಲಿ 600ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದು, ಎರಡುದಶಕಗಳಿಗಿಂತಲೂ ಹೆಚ್ಚು ಕಾಲ ದೇಶದ ಅಗ್ರ 10 ವೈದ್ಯಕೀಯ ಕಾಲೇಜುಗಳಲ್ಲಿ ಕೆಎಂಸಿಯು ಸ್ಥಾನ ಪಡೆದಿದೆ ಎಂದರು.
ಡಾ ಟಿಎಂಎ ಪೈ ಅವರ ಮಗ, ಪ್ರಸ್ತುತ ಮಾಹೆಯ ಕುಲಪತಿ ಡಾ. ರಾಮದಾಸ್ ಎಂ. ಪೈ ಅವರು 1979ರಲ್ಲಿ ಅಧಿಕಾರ ವಹಿಸಿಕೊಂಡು ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿಯನ್ನು (ಮಾಹೆ) ಸ್ಥಾಪಿಸಿದರು. 1993ರಲ್ಲಿ ಯುಜಿಸಿ ಕಾಯಿದೆ 1956ರ ಸೆಕ್ಷನ್ 3ರ ಅಡಿಯಲ್ಲಿ ಭಾರತ ಸರ್ಕಾರವು ಡೀಮ್ಡ್ ವಿಶ್ವವಿದ್ಯಾನಿಲಯ ಸ್ಥಾನಮಾನವನ್ನು ನೀಡುವುದರೊಂದಿಗೆ ಡಾ. ರಾಮದಾಸ್ ಎಂ ಪೈ ಅವರು ಮಣಿಪಾಲವನ್ನು ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯ ಟೌನ್ಶಿಪ್ ಮಾಡಿದರು ಮತ್ತು ಮೊದಲ ಬಾರಿಗೆ ಭಾರತೀಯ ಉನ್ನತ ಶಿಕ್ಷಣವನ್ನು ವಿದೇಶಕ್ಕೆ ತೆಗೆದುಕೊಂಡರು ಎಂದು ತಿಳಿಸಿದರು.
ಮಾಹೆ ಉಪಕುಲಪತಿ, ವಿಎಸ್ಎಂ (ನಿವೃತ್ತ) ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್ ಮಾತನಾಡಿ, ದಾರ್ಶನಿಕ ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಚಿಂತಕರು ಮತ್ತು ಬದಲಾವಣೆಗಾಗಿ ಆಗ್ರಹಿಸುವ ಧೈರ್ಯ ಮಾಡಿದ ಸಮರ್ಥ ವ್ಯಕ್ತಿಗಳ ಪ್ರಯತ್ನದ ಫಲವಾಗಿ ನಮ್ಮ ಸಂಸ್ಥೆಯ ಪರಂಪರೆಯು ನಿಂತಿದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಉನ್ನತ ದರ್ಜೆಯ ಸಂಶೋಧನಾ ಮೂಲ ಸೌಕರ್ಯವು ನಮ್ಮ ಪ್ರಸ್ತುತ ಸ್ಥಿತಿಯ ಅಗತ್ಯಗಳನ್ನು ಪೂರೈಸುತ್ತದೆ. ಸಂಶೋಧನೆಗೆ ಆದ್ಯತೆ ನೀಡಿ ಧನಸಹಾಯ ನೀಡುವುದನ್ನುಮುಂದುವರಿಸುತ್ತೇವೆ. ಮಾಹೆ - 2022 ಅನ್ನು ’ಇನ್ನೋವೇಶನ್ ಮತ್ತುಉದ್ಯಮಶೀಲತೆಯ ವರ್ಷ" ಎಂದು ಆಚರಿಸುವುದರೊಂದಿಗೆ, ನಮ್ಮ ಹೊಸ ನೀತಿಯಲ್ಲಿ ಸಕ್ರಿಯಗೊಳಿಸಲಾದ ಉದ್ಯಮಶೀಲತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಮಾಹೆ ರಿಜಿಸ್ಟ್ರಾರ್ ಡಾ. ನಾರಾಯಣ ಸಭಾಹಿತ್ ಮಾತನಾಡಿ, ನಾವು ಮಾಹೆಯ ಶಿಕ್ಷಣ ವಿಧಾನದಲ್ಲಿ ಪ್ರಗತಿ ಮತ್ತು ನವೀನ ಆಲೋಚನೆಗಳನ್ನುಅಳವಡಿಸಿಕೊಳ್ಳಲು ಯೋಜನೆಗಳನ್ನು ರೂಪಿಸುತ್ತೇವೆ. ಇದು ವ್ಯಾಪಕ ಶ್ರೇಣಿಯ ಶೈಕ್ಷಣಿಕ ಸಾಧನೆಗಳಿಗೆ ಪೂರಕವಾದ ಅವಕಾಶ ಕಲ್ಪಿಸುತ್ತದೆ ಮತ್ತು ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಪರಿಹಾರಗಳನ್ನು ತೋರಿಸಬಲ್ಲುದು ಎಂದು ಹೇಳಿದರು.
ಮಾಹೆ ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿ ಕಮಾಧ್ಯಮದ ನಿರ್ದೇಶಕ ಎಸ್. ಪಿ. ಕರ್ ಅವರು ಮಾಹೆ ಶ್ರೇಯಾಂಕದ ವಿವರಗಳನ್ನು ಹಂಚಿಕೊಂಡರು.