ಬಂಟ್ವಾಳ, ನ 16 (DaijiworldNews/MS): ಬಂಟ್ವಾಳ ಪುರಸಭಾ ವ್ಯಾಪ್ತಿಯ ಆಡಳಿತ ಸೌಧದ ಮುಂಭಾಗದಲ್ಲಿ ವಿವಾದಗಳೊಂದಿಗೆ ನಿರ್ಮಾಣ ವಾಗುತ್ತಿರುವ ಪಿಂಕ್ ಟ್ಲಾಯೆಟ್ ಗೆ ವಾಮಾಚಾರ ನಡೆಸಲಾಗಿದೆಯಾ? ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ನಿರ್ಮಾಣ ಹಂತದಲ್ಲಿರುವ ಪಿಂಕ್ ಟ್ಲಾಯೆಟ್ ನ ಒಳಗೆ ಕುಂಬಳಕಾಯಿ, ಪ್ರಸಾದ,ಮೊಟ್ಟೆ ಹಾಗೂ ಕುಂಬಳಕಾಯಿ ಮೇಲೆ ಗೊಂಬೆಯೊಂದನ್ನು ನಿರ್ಮಿಸಿ ಪೂಜೆ ಮಾಡಿದ ಕುರುಹುಗಳು ಪತ್ತೆಯಾಗಿವೆ.ಸಾರ್ವಜನಿಕ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಪಿಂಕ್ ಟ್ಲಾಯೆಟ್ ಕಾಮಗಾರಿ ನಡೆಯುವುದರಿಂದ ಜನರು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಕಣ್ಣಿಗೆ ಕಂಡಿದೆ.ಹಲವಾರು ವರ್ಷಗಳ ಇತಿಹಾಸ ವಿದ್ದ ಹಳೆಯ ಸಾರ್ವಜನಿಕ ರಂಗ ಮಂದಿರವನ್ನು ಹಾಗೂ ಅನೇಕ ಮರಗಳನ್ನು ಕೆಡವಿ ಹಾಕಿ ಸುಂದರ ಬಿಸಿರೋಡು ಕಲ್ಪನೆಗೆ ಸುಂದರವಾದ ರಸ್ತೆಯ ನಿರ್ಮಾಣ ಮಾಡಲಾಗಿತ್ತು. ಆದರೆ ಅದಾದ ಕೆಲವೇ ಸಮಯದಲ್ಲಿ ಸರಕಾರದ ಅದೇಶದಂತೆ ಪಿಂಕ್ ಟ್ಲಾಯೆಟ್ ನ್ನು ನಿರ್ಮಾಣ ಮಾಡಲು ಹೊರಟ ಪುರಸಭೆ ಬಿಸಿರೋಡಿನ ಅಂದವನ್ನು ಕೆಡಿಸುವ ರೀತಿಯಲ್ಲಿ ಬಿಸಿರೋಡಿನ ಹೃದಯ ಭಾಗದಲ್ಲಿ ಆಡಳಿತ ಸೌಧದ ಕಚೇರಿಗೆ ಪ್ರವೇಶ ಮಾಡುವ ಗೇಟ್ ನ ಹತ್ತಿರದಲೇ ನಿರ್ಮಾಣ ಮಾಡಿದೆ.
ಈ ಪಿಂಕ್ ಟ್ಲಾಯೆಟ್ ನ ವಿರುದ್ಧ ಸಮಿತಿಯೊಂದು ರಚನೆಯಾಗಿ ಜಿಲ್ಲಾಡಳಿತ ಸಹಿತ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿ ತಾತ್ಕಾಲಿಕ ತಡೆ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಟ್ಲಾಯೆಟ್ ನಿರ್ಮಾಣದ ಕಾಮಗಾರಿಗೆ ವೇಗ ಸಿಕ್ಕಿದೆ.ಕಾಮಗಾರಿ ನಡೆಯುವ ಸಂದರ್ಭದಲ್ಲಿಯೇ ಕಟ್ಟಡದ ಪ್ರವೇಶ ಭಾಗದಲ್ಲಿಯೇ ವಾಮಾಚಾರ ಮಾಡಲಾಗಿದೆ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಮೂಡಿದ್ದು, ಆತಂಕ ವ್ಯಕ್ತವಾಗಿದೆ.