ಬಂಟ್ವಾಳ, ನ 15 (DaijiworldNews/HR): ಪಾಣೆಮಂಗಳೂರು ನೂತನ ಸೇತುವೆಯ ಕಾಮಗಾರಿ ನಡೆಯುವ ನೇತ್ರಾವತಿ ನದಿಯ ಮಧ್ಯೆ ಭಾಗದಲ್ಲಿ ಟಿಪ್ಪರ್ ಲಾರಿಯೊಂದು ಸಿಲುಕಿಕೊಂಡ ಘಟನೆ ಮಂಗಳವಾರ ನಡೆದಿದೆ.
ದಿವ್ಯರೂಪ ಗುತ್ತಿಗೆ ಸಂಸ್ಥೆಗೆ ಸೇರಿದ ಲಾರಿ ಇದಾಗಿದ್ದು, ನೀರಿನ ಮಧ್ಯೆ ಸಿಲುಕಿಕೊಂಡಿದ್ದು, ಬಳಿಕ ಜೆಸಿಬಿ ಬಳಸಿಕೊಂಡು ಲಾರಿಯನ್ನು ದಡಕ್ಕೆ ಮುಟ್ಟಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಗುತ್ತಿಗೆ ಪಡೆದ ಕೆ.ಎನ್.ಆರ್.ಸಿ. ಯವರು ನೇತ್ರಾವತಿ ನೂತನ ಸೇತುವೆ ನಿರ್ಮಾಣದ ಕಾರ್ಯ ಆರಂಭಿಸಿದ್ದಾರೆ. ಕಳೆದ ಮೇ ಅಂತ್ಯಕ್ಕೆ ಸೇತುವೆ ಪಿಲ್ಲರ್ ಕಾಮಗಾರಿ ಮುಕ್ಕಾಲು ಭಾಗ ಪೂರ್ಣಗೊಂಡಿದ್ದು,ಮಳೆಗಾಲದಲ್ಲಿ ಇದರ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಮಳೆ ಕಡಿಮೆ ಆದ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ನೀರು ಕಡಿಮೆ ಇರುವುದರಿಂದ ಮತ್ತೆ ಕಾಮಗಾರಿಯನ್ನು ಆರಂಭಿಸಿದ್ದಾರೆ.
ಇನ್ನು ಪಿಲ್ಲರ್ ಕಾಮಗಾರಿಗಾಗಿ ನೇತ್ರಾವತಿ ನದಿಯ ಒಂದುಭಾಗದಿಂದ ನದಿಗೆ ಅಡ್ಡಲಾಗಿ ಮಣ್ಣು ಹಾಕಿ ನೀರನ್ನು ತಡೆಯಲಾಗುತ್ತದೆ. ಅ ರೀತಿಯಲ್ಲಿ ಮಣ್ಣು ತುಂಬಿಸುವ ಕಾರ್ಯದಲ್ಲಿದ್ದಾಗ ನೇತ್ರಾವತಿ ನದಿಯಲ್ಲಿ ಏಕಾಏಕಿ ನೀರು ಜಾಸ್ತಿಯಾಗಿದೆ, ಮಣ್ಣು ಖಾಲಿ ಮಾಡಲು ಒಂದು ಭಾಗದಿಂದ ನದಿ ಮಧ್ಯೆ ಭಾಗಕ್ಕೆ ತೆರಳಿ ಮಣ್ಣು ಖಾಲಿ ಮಾಡಿ ವಾಪಸು ತೆರಬೇಕಾದ ಸಂದರ್ಭದಲ್ಲಿ ನದಿಯ ಮಧ್ಯ ಭಾಗದ ಮಣ್ಣು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಲಾರಿ ಇನ್ನೊಂದು ಕಡೆಗೆ ದಾಟಲು ಸಾಧ್ಯ ವಾಗದೆ ಮಧ್ಯೆಯೇ ಬಾಕಿಯಾಗಿತ್ತು. ಆ ಬಳಿಕ ಜೆಸಿಬಿ ಬಳಸಿ ಟಿಪ್ಪರ್ ನ್ನು ಎಳೆದು ರಸ್ತೆಗೆ ತರಲಾಯಿತು.