ಸುಳ್ಯ, ನ 15 (DaijiworldNews/DB): ಕಲ್ಲುಗುಂಡಿಯ ಕಡಪಾಲದಲ್ಲಿ ಲಾರಿ ಮತ್ತು ಬಸ್ ನಡುವೆ ಢಿಕ್ಕಿ ಸಂಭವಿಸಿ ಆರಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ಘಟನೆಯಲ್ಲಿ ಬಸ್-ಲಾರಿ ನಡುವೆ ಸಿಕ್ಕಿ ಹಾಕಿಕೊಂಡ ಲಾರಿ ಚಾಲಕನನ್ನು ಹೊರಗೆಳೆಯಲು ಸ್ಥಳೀಯರು ರಾಡ್ನ್ನೇ ಕತ್ತರಿಸಬೇಕಾದ ಪ್ರಸಂಗ ನಡೆಯಿತು.
ಮೈಸೂರಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ಬಸ್ಗೆ ಕಡಪಾಲ ಸೇತುವೆ ಬಳಿ ಲಾರಿ ಢಿಕ್ಕಿ ಹೊಡೆದಿದೆ. ಮಳೆಯಿಂದಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಗಾಯಾಳುಗಳ ಪೈಕಿ ರಾಮ ನಾಯ್ಕ್ ಪುಣಚ, ಜೀವನ್ ಯೂನತ್ ಕೆರೆಮೂಲೆ, ತಂಬಿ ವಯನಾಡು ಬೆಳ್ಳಾರೆ ಅವರನ್ನು ತತ್ಕ್ಷಣ ಆಂಬುಲೆನ್ಸ್ ಮುಖಾಂತರ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದವರನ್ನು ಕೊಡಗು, ಸಂಪಾಜೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೋರ್ವ ಗಾಯಾಳು ಲಾರಿ ಚಾಲಕ ಬಸ್ ಮತ್ತು ಲಾರಿಯ ನಡುವೆ ಸಿಲುಕಿದ್ದು, ಅವರನ್ನು ಹೊರ ತೆಗೆಯಲು ಸ್ಥಳೀಯರು ಹರಸಾಹಸ ಪಟ್ಟರು. ಗ್ಯಾಸ್ ಕಟ್ಟರ್ ತರಿಸಿ ರಾಡ್ ತುಂಡರಿಸಿ ಚಾಲಕನನ್ನು ಹೊರಗೆಳೆದರು. ಚಾಲಕನ ಎರಡೂ ಕಾಲುಗಳು ಜಖಂಗೊಂಡಿದ್ದು, ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.