ಮಂಗಳೂರು, ನ 15 (DaijiworldNews/DB): ಬಹುಮುಖ ಪ್ರತಿಭೆ ಜೀವನದಲ್ಲಿ ಹೆಚ್ಚಿನ ಯಶಸ್ಸು ತರುತ್ತದೆ. ಕ್ರೀಡೆಯಿಂದ ಆತ್ಮವಿಶ್ವಾಸ ವೃದ್ದಿಯಾಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದ್ದಾರೆ.
ವಳಚ್ಚಿಲ್ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕವಾಗಿ ಸಾಧನೆ ಮಾಡಿದರೆ ಸಾಲದು. ಕ್ರೀಡಾ ಕ್ಷೇತ್ರದಲ್ಲಿಯೂ ತಮ್ಮ ಸಾಧನೆ ಮೆರೆಯಬೇಕು. ಇದರಿಂದ ಬದುಕಿನಲ್ಲಿ ಸೋಲು-ಗೆಲುವಿನ ಪಾಠ ಕಲಿಯಲು ಸಾಧ್ಯ. ಆಟೋಟ ಸ್ಪರ್ಧೆಗಳಿಂದ ಮಾನಸಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಿದೆ ಎಂದರು.
ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್, ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ವಾಸ್ತು ತಜ್ಞೆ ದೀಪಿಕಾ ಎ. ನಾಯಕ್, ಉಪ ಪ್ರಾಂಶುಪಾಲರಾದ ರಾಘವೇಂದ್ರ ಶೆಣೈ, ಸುಬ್ರಹ್ಮಣ್ಯ ಉಡುಪ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ. ಎನ್.ಕೆ. ವಿಜಯನ್ ಕ್ರೀಡಾಳುಗಳಿಗೆ ಪ್ರತಿಜ್ಞೆ ಬೋಧಿಸಿದರು. ಕಾರ್ಯಕ್ರಮ ನಿರ್ದೇಶಕ ಹರಿಪ್ರಸಾದ್ ಬಿ. ಸಾಗತಿಸಿ, ಕಾರ್ಯಕ್ರಮ ಸಹಾಯಕ ನಿರ್ದೇಶಕ ಬಾಲಕೃಷ್ಣ ಶೆಟ್ಟಿ ವಂದಿಸಿದರು. ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ನಿಶತ್ ಫಾತಿಮಾ ನಿರೂಪಿಸಿದರು.
ಪ್ರಜ್ವಲ್ ರೂಡಿಗಿ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.