ಕಾಸರಗೋಡು, ಫೆ 22(SM): ಪೆರಿಯದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆಗೆ ಬಳಸಿದ ಮಾರಾಕಾಸ್ತ್ರ ಮತ್ತು ವಸ್ತ್ರಗಳನ್ನು ಘಟನೆ ನಡೆದ ಪರಿಸರದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಬಂಧಿತ ನಾಲ್ಕನೇ ಆರೋಪಿ ಅನಿಲ್ ಕುಮಾರ್ ಮತ್ತು ಏಳನೇ ಆರೋಪಿ ವಿಜಿನ್ ನನ್ನು ಇಂದು ಮಧ್ಯಾಹ್ನ ಘಟನಾ ಸ್ಥಳಕ್ಕೆ ಕರೆದೊಯ್ದು ಮಾಹಿತಿ ಕಲೆ ಹಾಕಿದ್ದು, ಸಮೀಪದ ರಬ್ಬರ್ ತೋಟದ ಕಟ್ಟಡದಲ್ಲಿ ಎರಡು ತಲವಾರು ಪತ್ತೆಯಾಗಿದೆ. ತಲವಾರಿನಲ್ಲಿ ರಕ್ತದ ಕಲೆಗಳು ಕಂಡುಬಂದಿವೆ.
ಕೃತ್ಯದ ಬಳಿಕ ಈ ದಾರಿಯಾಗಿ ನಡೆದುಕೊಂಡು ಬಂದ ಆರೋಪಿಗಳು ಪೆರಿಯ ಪಾಕ ಎಂಬಲ್ಲಿನ ಮನೆಗೆ ಬಂದು ವಸ್ತ್ರ ಬದಲಾಯಿಸಿ ಕೃತ್ಯದ ಸಂದರ್ಭದಲ್ಲಿ ಧರಿಸಿದ್ದ ವಸ್ತ್ರಗಳನ್ನು ನಿರ್ಜನ ಸ್ಥಳದಲ್ಲಿ ಉರಿಸಿರುವುದು ಕಂಡು ಬಂದಿದೆ.
ಬುಧವಾರದಂದು ನಡೆಸಿದ ತನಿಖೆಯಿಂದ ನಾಲ್ಕು ಮಾರಕಾಸ್ತ್ರಗಳನ್ನು ಸಮೀಪದ ಬಾವಿಯಿಂದ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಮಂದಿಯನ್ನು ಬಂಧಿಸಲಾಗಿದ್ದು, ಕೃತ್ಯದಲ್ಲಿ ಸಂಚು ನಡೆಸಿದವರ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ತನಿಖಾ ತಂಡ ವಿಫಲವಾಗಿದೆ.