ಉಳ್ಳಾಲ, ನ 14 (DaijiworldNews/MS): ಕರ್ನಾಟಕ -ಕೇರಳ ಗಡಿಭಾಗ ತಲಪಾಡಿಯಲ್ಲಿರುವ ಅಂಗನವಾಡಿ ಮಕ್ಕಳ ಜೀವ ಅಪಾಯದಲ್ಲಿದೆ. ಕಟ್ಟಡದ ಹಿಂಭಾಗದ ಗುಡ್ಡ ಕುಸಿಯುತ್ತಲೇ ಇದೆ. ಗ್ರಾಮಸಭೆ, ವಾರ್ಡು ಸಭೆಗಳಲ್ಲಿ ಹಲವು ವರ್ಷಗಳಿಂದ ಗ್ರಾಮಸ್ಥರು ದೂರು ನೀಡುತ್ತಿದ್ದರೂ ಪ್ರಯೋಜನವಿಲ್ಲ. ಮಕ್ಕಳ ಕಡೆಗೆ ಹೆಚ್ಚಿನ ಎಚ್ಚರವಹಿಸಬೇಕಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗಮನಹರಿಸದೇ ಇರುವುದು ಹೆತ್ತವರ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದೆ ತಲಪಾಡಿ ಗ್ರಾಮಸೌಧದಲ್ಲಿ ಕಾರ್ಯಾಚರಿಸುತ್ತಿದ್ದ ಅಂಗನವಾಡಿ ಕಟ್ಟಡ ಹಿಂಬದಿಯ ಗುಡ್ಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ 5 ಮೀ. ದೂರಕ್ಕೆ ಸ್ಥಳಾಂತರಗೊಂಡಿತ್ತು. ಆದರೆ ಮತ್ತೆ ಕಟ್ಟಡವನ್ನು ಕುಸಿಯುವ ಗುಡ್ಡದ ಕೆಳಭಾಗದಲ್ಲೇ ಕಟ್ಟಲಾಗಿತ್ತು. ಮತ್ತೆ ಮಕ್ಕಳ ಹೆತ್ತವರು ಭೀತಿಯನ್ನು ಎದುರಿಸುವಂತಾಗಿದೆ. ಕುಸಿದ ಮಣ್ಣಿನ ರಾಶಿ, ಬೆಳೆದುನಿಂತ ಗಿಡಗಂಟೆಗಳ ನಡುವೆಯೇ ಅಂಗನವಾಡಿ ಕರ್ಯಾಚರಿಸುತ್ತಿದೆ. ಗಿಡಗಂಟೆಗಳಿಂದ ಹಾವು, ಚೇಳು ಒಳನುಸುಳಿದರೂ ಮಕ್ಕಳಿಗೆ ಅಪಾಯ ತೆರೆದಿಟ್ಟ ಬುತ್ತಿ. ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ ಶೌಚಾಲಯವಿದ್ದರೂ, ನೀರಿನ ವ್ಯವಸ್ಥೆಯೇ ಇಲ್ಲ. ನೆರೆಯ ಉದ್ಯಮಿ ಮನು ಶೆಟ್ಟಿ ಅವರು ಗ್ರಾ.ಪಂ ಮಾಡಬೇಕಾದ ಕರ್ತವ್ಯವನ್ನು ತಾವೇ ನಿರ್ವಹಿಸುತ್ತಾ, ಅಂಗನವಾಡಿಗೆ ನೀರು ಪೂರೈಸುತ್ತಿದ್ದಾರೆ. ಅಸಡ್ಡೆ ತೋರುವ ಗ್ರಾ.ಪಂ ಹಾಗೂ ಅಧಿಕಾರಿಗಳು ತಕ್ಷಣವೇ ಕ್ರಮಕೈಗೊಳ್ಳಬೇಕು ಅನ್ನುವ ಆಗ್ರಹ ಹೆತ್ತವರದ್ದಾಗಿದೆ.
ಅವ್ಯವಸ್ಥೆಯ ಆಗರ ಗ್ರಾಮಸೌಧ :
2015ರಲ್ಲಿ ಡಿ.31 ರಂದು ತಲಪಾಡಿ ಗ್ರಾಮ ಪಂಚಾಯತ್ಗೆ ಕರ್ನಾಟಕ ಸರಕಾರದ 5ನೇ ಹಂತದ ಸುವರ್ಣ ಗ್ರಾಮದ ಯೋಜನೆಯಡಿಯಲ್ಲಿ ಮಂಜೂರಾದ ವಾಣಿಜ್ಯ ಕಟ್ಟಡ ಮತ್ತು ಅಂಗನವಾಡಿ ಕಟ್ಟಡ ಗ್ರಾಮಸೌಧ. ಅಂದು ಅರಣ್ಯಸಚಿವರಾಗಿದ್ದ ಬಿ.ರಮಾನಾಥ ರೈ ಕಟ್ಟಡವನ್ನು ಉದ್ಘಾಟಿಸಿದ್ದು, ತಲಪಾಡಿ ಗ್ರಾಮದ ಅಧ್ಯಕ್ಷರಾಗಿ ಸುರೇಶ್ ಆಳ್ವ ಇದ್ದರು. ಆದರೆ ಇದೀಗ ಅಂಗನವಾಡಿಗೆ ತಾಗಿಕೊಂಡೇ ಇರುವ ತಲಪಾಡಿ ಗ್ರಾಮಸೌಧ ಕಟ್ಟಡ ನಿರ್ವಹಣೆಯಿಲ್ಲದೆ ಕೊಳಚೆ ಕೊಂಪೆಯಾಗಿ ಮಾರ್ಪಾಡಾಗಿದೆ. ಸೌಧದಲ್ಲಿರುವ ಸಭಾಂಗಣದ ಕಿಟಕಿವರೆಗೂ ಕುಸಿದ ಗುಡ್ಡದ ಮಣ್ಣು ಇದೆ. ಮಳೆ ಬಂದರೆ ಮಣ್ಣು ಮಿಶ್ರಿತ ನೀರು ಸಭಾಂಗಣದೊಳಕ್ಕೆ ನುಸುಳುತ್ತಿದೆ. ಕಿಟಕಿಯ ಗಾಜುಗಳಲ್ಲೇ ಒಡೆದುಹೋಗಿದೆ. ಪಶುಸಂಗೋಪನಾ ಇಲಾಖೆಯೂ ಸಭಾಂಗಣದಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಿಸುತ್ತಿದೆ. ನೆಲವಿಡೀ ಕೆಸರುತುಂಬಿ ಉಪಯೋಗಕ್ಕೆ ಬಾರದ ರೀತಿಯಲ್ಲಿದೆ.
ನೀರಿಲ್ಲದ ಶೌಚಾಲಯಕ್ಕೆ 24 ಗಂಟೆ ಬೀಗ : ಕಟ್ಟಡದಲ್ಲಿ ವರ್ತಕರು, ಅಧಿಕಾರಿಗಳು, ಸಾರ್ವಜನಿಕರು ಇದ್ದರೂ ಸೌಧಕ್ಕೆ ಇರುವ ಶೌಚಾಲಯ ನೀರಿಲ್ಲದೆ ಮುಚ್ಚಿಹೋಗಿದೆ. ಇದರೊಳಗೆ ತುಂಬಿದ ಕೊಳಚೆಯಿಂದ ರೋಗಹರಡುವ ಭೀತಿಯಿದೆ. 24 ಗಂಟೆಯೂ ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ಕಟ್ಟಡದಲ್ಲಿ ಕರ್ಯಾಚರಿಸುತ್ತಿರುವ ಮಹಿಳಾ ಸಿಬ್ಬಂದಿ ಬಹಳಷ್ಟು ತೊಂದರೆ ಅನುಭವಿಸಬೇಕಾಗಿದೆ.
ಪೋಸ್ಟ್ ಆಫೀಸ್ ಸುತ್ತ ಸತ್ತ ಹೆಗ್ಗಣಗಳು : ಕಟ್ಟಡದ ಸುತ್ತ ಗಿಡಗಂಟೆಗಳು ಬೆಳೆದುನಿಂತಿದ್ದರೂ ಸ್ವಚ್ಛತೆಯನ್ನು ಮಾಡಲಾಗಿಲ್ಲ. ಕುಡಿದ ಬಾಟಲಿಗಳು, ಸತ್ತ ಹೆಗ್ಗಣಗಳು ಇಲ್ಲಿರುವ ಪೋಸ್ಟ್ ಆಫೀಸ್ ಮುಂದೆ ಇದೆ. ವೃದ್ಧರು, ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪೋಸ್ಟ್ ಆಫೀಸಿಗೆ ಬರುತ್ತಿರುತ್ತಾರೆ. ಗಿಡಗಂಟೆಗಳನ್ನು , ಕೊಳಚೆ ರಾಶಿಯನ್ನು ದಾಟಿಯೇ ಪೋಸ್ಟ್ ಆಫೀಸ್ ಮುಂದೆ ಸಾಲುನಿಲ್ಲಬೇಕಾಗಿದೆ. ಅವ್ಯವಸ್ಥೆ ಎದ್ದು ಕಾಣುತ್ತಿದ್ದರೂ ಗ್ರಾ.ಪಂ ಆಡಳಿತವಾಗಲಿ, ಅಧಿಕಾರಿಯಾಗಲಿ ಗಮನಹರಿಸದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಭ್ರಷ್ಟಾಚಾರದ ಕಟ್ಟಡ :
ಕಟ್ಟಡ ನಿರ್ಮಾಣಗೊಂಡ ಏಳು ವರ್ಷಗಳಲ್ಲೇ ಬಿರುಕು ಬಿಟ್ಟಿದೆ. ಕಟ್ಟಡದ ಮೇಲೆಯೂ ಇನ್ನೂ ಅಂತಸ್ತು ಕಟ್ಟಲು ಅವಕಾಶ ಕಲ್ಪಿಸುವಂತೆ ಕಟ್ಟಲಾಗಿದೆ. ಆದರೆ ಕಟ್ಟಡದೊಳಕ್ಕೆ ಹಾಕಿರುವ ರಾಡು ಸಣ್ಣ ಪ್ರಮಾಣದಾಗಿದ್ದರೂ, ಸಾರ್ವಜನಿಕರಿಗೆ ಕಾಣಲು ಮೇಲ್ಭಾಗದಲ್ಲಿ ದಪ್ಪದ ರಾಡುಗಳನ್ನು ಕಟ್ಟಿ ಭ್ರಷ್ಟಾಚಾರ ನಡೆಸಲಾಗಿದೆ. ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.
"7 ವರ್ಷದ ಹಿಂದೆ ನಿರ್ಮಾಣಗೊಂಡಿದೆ. ನೀರಿನ ವ್ಯವಸ್ಥೆಯಿಲ್ಲ, ಸ್ವಚ್ಛತೆಯಿಲ್ಲ. ಕಟ್ಟಡದ ಎದುರುಗಡೆ ಅಪಘಾತಗಳು ನಿರಂತರವಾಗಿ ನಡೆಯುತ್ತಿದೆ.ಪೋಸ್ಟ್ ಆಫೀಸ್ ಎದುರುಗಡೆ ಹೆಗ್ಗಣಗಳ ರಾಶಿಯೇ ಇದೆ. ಗ್ರಾಮಸಭೆ, ಪಂ. ಸಭೆಗಳಲ್ಲಿ ಗಮನವೇ ಹರಿಸುತ್ತಿಲ್ಲ. ಗ್ರಾಮಪಂಚಾಯಿತಿ ಎದುರುಗಡೆ ಕರಿಪತಾಕೆ ಹಿಡಿದುಕೊಂಡು ಪ್ರತಿಭಟಿಸುವ ತೀರ್ಮಾನ ಕೈಗೊಂಡಿದ್ದೇವೆ". - ಯಶು ಪಕಳ ಗ್ರಾಮಸ್ಥ
"ಕಟ್ಟಡದಲ್ಲಿ ವರ್ತಕರಿದ್ದಾರೆ, ಶೌಚಾಲಯ ವ್ಯವಸ್ಥೆಯಿದ್ದರೂ ನೀರಿಲ್ಲ. ಅಂಗನವಾಡಿಯಲ್ಲಿ 30 ಮಕ್ಕಳಿದ್ದರೂ ನೀರಿಲ್ಲ. ಉದ್ಯಮಿ ಮಾನವೀಯತೆಯಿಂದ ನೀರು ಕೊಡುತ್ತಿದ್ದಾರೆ. ಗುಡ್ಡ ಕುಸಿಯುವುದು ಮಕ್ಕಳ ಜೀವದ ಮೇಲೆ ತೂಗುಗತ್ತಿ ಇರಿಸಿದಂತಾಗಿದೆ.ಅಧಿಕಾರಿಗಳೇ ಅನಾಹುತವಾಗುವ ಮುನ್ನ ಎಚ್ಚೆತ್ತಿ , ಅಸಡ್ಡೆ ತೋರಿಸದೆ ಕಾರ್ಯನಿರ್ವಹಿಸಿರಿ. ಪರಿಸರ ಕೂಡ ಶುಚಿಯಾಗಿಲ್ಲ.ಚರಂಡಿ ನೀರು ಬರುವುದು , ಸರಿಸೃಪ ಬಂದು ಕಚ್ಚಿದರೂ ಗೊತ್ತಾಗದು".- ಯೂಸುಫ್
ಹೆತ್ತವರು