ಮಂಗಳೂರು,ಫೆ 22(MSP): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆ ಕಾಮಗಾರಿಗೆ ರಾಜ್ಯಪಾಲ ವಜೂಭಾಯಿ ವಾಲಾ ಇಂದು ಶಂಕುಸ್ಥಾಪನೆ ನೆರವೇರಿಸಿದರು.
ಆ ಬಳಿಕ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣವೂ, ಅತ್ಯುತ್ತಮ ಗುಣಮಟ್ಟದಲ್ಲಿದ್ದು ಸ್ವಚ್ಚತೆಯಲ್ಲೂ ನಂ.1 ಸ್ಥಾನ ಪಡೆದಿದೆ. ಇನ್ನು ಪ್ರಯಾಣಿಕರ ದಟ್ಟಣೆಯಲ್ಲಿ ವಿಶ್ವದ 31 ನೇ ಸ್ಥಾನದಲ್ಲಿದ್ದು, ಇದು 3 ನೇ ಸ್ಥಾನಕ್ಕೆ ಏರಬೇಕಾದ ಪ್ರಯತ್ನ ನಡೆಯಬೇಕಾಗಿದೆ ಎಂದರು.
ಪ್ರಸ್ತುತ ಟರ್ಮಿನಲ್ ವಿಸ್ತಾರ 19, 509 ಚದರ ಮೀಟರ್ ಇದೆ. ಹೊಸದಾಗಿ 132.24 ಕೋಟಿ ವೆಚ್ಚದಲ್ಲಿ 11, 343 ಚದರ ಮೀಟರ್ ವಿಸ್ತೀರ್ಣದ ಹೆಚ್ಚುವರೊ ಟರ್ಮಿನಲ್ ನಿರ್ಮಿಸಲಾಗುತ್ತಿದ್ದು ಇದು 2020 ರ ಏಪ್ರಿಲ್ ನಲ್ಲಿ ಪೂರ್ಣಗೊಳ್ಳಲಿದೆ. ಸದ್ಯ ದಟ್ಟಣೆಯ ಅವಧಿಯಲ್ಲಿ ಪ್ರತಿ ಗಂಟೆಗೆ 730 ಪ್ರಯಾಣಿಕರಿಗೆ ಬೋರ್ಡಿಂಗ್ ಅವಕಾಶ ಕಲ್ಪಿಸುವ ಸಾಮರ್ಥ್ಯ ಇದೆ. ಹೊಸ ಟರ್ಮಿನಲ್ ನಿರ್ಮಾಣದ ಬಳಿಕ ಪ್ರತಿ ಗಂಟೆಗೆ 1 ಸಾವಿರ ಪ್ರಯಾಣಿಕರಿಗೆ ಬೋರ್ಡಿಂಗ್ ಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ದೊರಕಲಿದೆ. ಇದರಿಂದಾಗಿ ವಾರ್ಷಿಕ ಪ್ರಯಾಣಿಕರ ನಿರ್ವಹಣೆಯೂ 20 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಲಿದೆ ಎನ್ನಲಾಗಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ದೆಹಲಿಯಲ್ಲಿ ಮಂಗಳೂರು ದೇಶದ ಎಂಟು ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಮಂಗಳೂರಿನಲ್ಲಿ ರಾಜ್ಯಪಾಲರು ಶಂಕುಸ್ಥಾಪನೆ ನೆರವೇರಿಸಿದರು.
ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮನಾಥ್ ಕೋಟ್ಯಾನ್, ಮೇಯರ್ ಬಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.