ಕಾಸರಗೋಡು, ನ 14 (DaijiworldNews/HR): ಅಕ್ರಮವಾಗಿ ದಾಸ್ತಾನಿಡಲಾಗಿದ್ದ ಪಡಿತರ ಸಾಮಗ್ರಿಗಳನ್ನು ಮಂಜೇಶ್ವರ ತಾಲೂಕು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಉಪ್ಪಳ ಸಮೀಪದ ಬಾಯಿಕಟ್ಟೆ ಎಂಬಲ್ಲಿಂದ ವಶ ಪಡಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಪಡಿತರ ಸಾಮಾಗ್ರಿಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯಂತೆ ಅಧಿಕಾರಿಗಳು ಬಾಯಿಕಟ್ಟೆ ಯ ಎ.ಕೆ.ಎಂ ಜನರಲ್ ಸ್ಟೋರ್ ಎಂಬ ಸರಕು ಸಾಮಾಗ್ರಿ ಅಂಗಡಿಗೆ ದಾಳಿ ನಡೆಸಿ ಅಕ್ರಮ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ.
ಆಹಾರ ಸರಬರಾಜು ಅಧಿಕಾರಿ ಕೆ.ಪಿ ಸಜಿಮೋನ್ ರವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 641 ಕಿಲೋ ಪಡಿತರ ಬಿಳಿ ಅಕ್ಕಿ ಹಾಗೂ 75 ಕಿಲೋ ಕುಚ್ಚ ಲಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ಸಮೀಪದ ಜೆ. ಪಿ ಜನರಲ್ ಸ್ಟೋರ್ ಎಂಬ ಮಳಿಗೆಗೆ ದಾಳಿ ನಡೆಸಿದ ಅಧಿಕಾರಿಗಳು 117 ಕಿಲೋ ಬಿಳಿ ಅಕ್ಕಿ ಯನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ರೇಶನ್ ಸಾಮಾಗ್ರಿಗಳನ್ನು ಎನ್.ಎಫ್ ಎಸ್.ಎ ಪಡಿತರ ವಿತರಣಾ ಕೇಂದ್ರಕ್ಕೆ ಹಸ್ತಾಂತ ರಿಸಲಾಯಿತು.
ಪಡಿತರ ಅಂಗಡಿಗಳಿಂದ ಲಭಿಸುವ ಸಾಮಾಗ್ರಿಗಳನ್ನು ಗ್ರಾಹಕರು ಈ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದುದಾಗಿ ಅಂಗಡಿ ಮಾಲಕರು ಸ್ಪಷ್ಟನೆ ನೀಡಿದ್ದಾರೆ.
ಎರಡೂ ಅಂಗಡಿ ಮಾಲಕರ ವಿರುದ್ಧ ಅಗತ್ಯ ವಸ್ತುಗಳ ದುರ್ಬಳಕೆ ಕಾಯ್ದೆಯಂತೆ ಕ್ರಮ ತೆಗೆದು ಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ತಪಾಸಣೆ ಹೆಚ್ಚಿಸಲಾಗುವುದು ಎಂದು ತಾಲೂಕು ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿ ಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ಯಲ್ಲಿ ತಾಲೂಕು ಸರಬರಾಜು ಅಧಿಕಾರಿ ಎ.ರವೀಂದ್ರ ನ್, ಆರ್ ಸುರೇಶ್ ನಾಯ್ಕ್, ನೌಶಾದ್ ನೇತೃತ್ವ ನೀಡಿದರು.