ಕಾರ್ಕಳ, ನ 14 (DaijiworldNews/HR): ರಾಜ್ಯದ ಜನಸಂಖ್ಯೆಯಲ್ಲಿ ಮೂರನೇ ಒಂದಂಶದಷ್ಟು ಮಂದಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಅಂತವರ ಸಾಮಾಜಿಕ ನ್ಯಾಯ ಪರಿಪಾಲನೆಯ ಹೊಣೆಗಾರಿಕೆ ಸರಕಾರದಾಗಿದೆ. ಸುಪ್ರಿಂ ಕೋರ್ಟ್ ಗೈಡ್ಲೈನ್ ಮೀರಿ ಸಂವಿಧಾನ ಸುತ್ತೋಲೆಗೆ ತಿದ್ದುಪಡಿ ತಂದು ಪರಿಶಿಷ್ಟ ಜಾತಿ, ಪಂಗಡಗಳಿಗೆ ಶೇ. 15 ಇದ್ದ ಮೀಸಲಾತಿಯನ್ನು ಶೇ.17ಕ್ಕೆ ಏರಿಸಿದ ಕೀರ್ತಿಯೂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರಕ್ಕೆ ಸಲ್ಲುತ್ತದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಾರ್ಕಳದ ಕಾಬೆಟ್ಟುವಿನಲ್ಲಿ ರೂ. 6 ಕೋ ವೆಚ್ಚದಲ್ಲಿ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧಪಡಿಸಿದ ಡಾ. ಬಿ.ಆರ್ ಅಂಬೆಡ್ಕರ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನಿಲ್ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವು ದಶಕಗಳ ಕನಸಾಗಿತ್ತು. ಜಾಗದ ಸಮಸ್ಯೆ, ಸುಸಜ್ಜಿತ, ಆಧುನಿಕ ರೀತಿ ನಿರ್ಮಾಣವಾಗಬೇಕು ಎನ್ನುವ ಕಲ್ಪನೆಯೊಂದಿಗೆ ಒಂದಿಷ್ಟು ತಿಂಗಳುಗಳು ತಡವಾಗಿತ್ತು ಅದೀಗ ಈಡೇರುತ್ತಿದೆ. ಪರಿಶಿಷ್ಠ ಜಾತಿ, ಪಂಗಡಗಳ ಸಮುದಾಯದ ಭೂಪರಿವರ್ತನೆ, ಮಾರಾಟಕ್ಕೆ ತೊಡಕಾಗಿತ್ತು. ಜಿಲ್ಲಾಮಟ್ಟದಲ್ಲೆ ಪರವಾನಿಗೆ ನೀಡುವಂತೆ ಕ್ರಮವಹಿಸಲಾಗಿದೆ. ಮೊದಲ ಬಾರಿಗೆ ದೈವ ನರ್ತಕರಿಗೆ ಕರ್ನಾಟಕ ರಾಜ್ಯೋತ್ಸವ ನೀಡಲಾಗಿದೆ. ಸರಕಾರದಿಂದ ವಿವಿಧ ಯೋಜನೆಯಡಿಯಲ್ಲಿ ದೈವಸ್ಥಾನಗಳಿಗೆ ಅನುದಾನಗಳು ಬಿಡುಗಡೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಕೆಲ ದೈವಸ್ಥಾನದ ಜಾಗದ ಕುರಿತು ವಿವಾದಗಳಿದ್ದು, ಇದರ ಕುರಿತು ಮಧ್ಯೆ ಪ್ರವೇಶಿಸಿ ಸಮಸ್ಸೆಯ ಬಗೆಹಿರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಅವರಿಗೆ ಸೂಸಿಸಿದರು.
ಕರ್ನಾಟಕ ಗೇರು ಅಭಿವೃದ್ದಿ ನಿಗಮ ಅಧ್ಯಕ್ಷ ಬಿ.ಮಣಿರಾಜ್ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕ ಅನಿತಾ ವಿ. ಮಡ್ಲೂರು, ಕವಶಿಸಸಂ ಅಽಕ್ಷಕ ಅಭಿಯಂತರ ಎಚ್ ಎಲ್, ಸಹಾಯಕ ಕಾರ್ಯಪಾಲಕ ರಾಮು ವೈ. ಎಚ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ರಾಘವೇಂದ್ರ ವರ್ಣಿಕರ, ತಹಶಿಲ್ದಾರ್ ಪ್ರದೀಪ ಕುರ್ಡೆಕರ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಗುರುದತ್ತ್ ಎಂ.ಎನ್, ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ.ಶೆಟ್ಟಿ, ಕೊರಗ ಸಮುದಾಯದ ಕೊರಗ ಪಳ್ಳಿ, ಮೊಗೇರ ಸಮುದಾಯದ ಶ್ಯಾಂ ಕಾಬೆಟ್ಟು, ಆದಿದ್ರಾವಿಡ ಸಮಾಜದ ಬೊಗ್ಗು ಪರಪ್ಪಾಡಿ, ಪರವ ಸಮಾಜದ ಚುಕುಡ ಪರವ, ನಲಿಕೆ ಸಮುದಾಯದ ಬಾಬು ನಲಿಕೆ ಮೊದಲಾದವರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣಾರ ಸಹಿತ ಹಲವು ಮಂದಿ ಪರಿಶಿಷ್ಟ ಜಾತಿ ಸಮುದಾಯದ ಸಾಧಕರನ್ನು ಗುರುತಿಸಿ ಸಮ್ಮಾನಿಸಲಾಯಿತು. ಸುಂದರ ಪ್ರಸ್ತಾವನೆಗೈದು, ಜಿ.ಪಂ ಮಾಜಿ ಅಧ್ಯಕ್ಷ ಬಾಬು ಸ್ವಾಗತಿಸಿ, ನಾಗೇಶ್ ನಿರೂಪಿಸಿದರು. ಸತೀಶ್ ಇರ್ವತ್ತೂರು ವಂದಿಸಿದರು.