ಬೆಂಗಳೂರು, ನ 13 (DaijiworldNews/SM): ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾದ ಹಾಗೂ ಘರ್ಷಣೆಗೆ ಕಾರಣವಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ಮತ್ತೋರ್ವ ಆರೋಪಿಯೋರ್ವನನ್ನು ಬಂಧಿಸಿದೆ. ಆ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ತನಕ ಹದಿನೈದು ಮಂದಿ ಆರೋಪಿಗಳನ್ನು ಎನ್ ಐ ಎ ತನಿಖಾ ತಂಡ ಬಂಧಿಸಿದಂತಾಗಿದೆ.
ಜುಲೈ 26ರಂದು ದಕ್ಷಿಣ ಕನ್ನಡದ ಬೆಳ್ಳಾರೆ ಗ್ರಾಮದ ನಿವಾಸಿ ಮತ್ತು ಬಿಜೆಪಿಯ ಯುವ ಘಟಕ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ನೆಟ್ಟಾರು ಅವರ ಮೇಲೆ ಪಿಎಫ್ಐ ಸದಸ್ಯರು ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಎನ್ಐಎ ಈ ವರ್ಷದ ಆಗಸ್ಟ್ 4 ರಂದು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಈಗಾಗಲೇ ಪ್ರಕರಣದಲ್ಲಿ ಇತರ 14 ಆರೋಪಿಗಳನ್ನು ಬಂಧಿಸಲಾಗಿದೆ.
ಮಸೂದ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ನಾಯಕರು ಮತ್ತು ಸದಸ್ಯರು ಪರ್ವೀನ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ. ಇನ್ನು, ದಕ್ಷಿಣ ಕನ್ನಡದಲ್ಲಿ ಭಯೋತ್ಪಾದನಾ ನಿಗ್ರಹ ತನಿಖಾ ಸಂಸ್ಥೆ ಶನಿವಾರ ಶೋಧ ನಡೆಸಿದ್ದು ಬೆಳ್ಳಾರೆ ನಿವಾಸಿ ಶಹೀದ್ ಎಂ. ಅವರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 302 ಮತ್ತು 34 ಮತ್ತು ಯುಎ (ಪಿ) ಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಸೆಕ್ಷನ್ 16 ಮತ್ತು 18 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶೋಧದ ವೇಳೆ ಆರೋಪಿಯ ಮನೆಯಿಂದ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎನ್ಐಎ ತಿಳಿಸಿದೆ.