ಉಳ್ಳಾಲ, ನ 13 (DaijiworldNews/HR): ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಭಾಗಿತ್ವದಲ್ಲಿ ವಿಶ್ವಮಧುಮೇಹ ದಿನದ ಅಂಗವಾಗಿ ಮ್ಯಾರಥಾನ್ ಓಟ 'ಮುಲ್ಲರ್ ರನ್' ಮಂಗಳೂರಿನ ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಗೀತಾ ಕುಲಕರ್ಣಿ ಇಂದು ಬೆಳಿಗ್ಗೆ ಚಾಲನೆ ನೀಡಿದರು.
ವಿಶ್ವ ಮಧುಮೇಹ ದಿನದ ಅಂಗವಾಗಿ ಹಮ್ಮಿಕೊಂಡಿರುವ ಮ್ಯಾರಥಾನ್ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಆರೋಗ್ಯಯುತ ವಾತಾವರಣಕ್ಕೆ ಎಲ್ಲರೂ ಆರೋಗ್ಯದ ಕಡೆ ಹೆಚ್ಚಿನ ಒಲವು ಹರಿಸಬೇಕು. ಉತ್ತಮವಾದುದನ್ನು ಯೋಚಿಸುವುದರ ಜೊತೆಗೆ ಒಳ್ಳೆಯದನ್ನು ತಿನ್ನುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ಸಂಚಾರಿ ನಿಯಮದ ಎಲ್ಲಾ ನಿಯಮಗಳನ್ನು ಅವಶ್ಯಕವಾಗಿ ಪಾಲನೆ ಮಾಡಿ ಎಂದರು.
ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆ ಫಾದರ್ ಮುಲ್ಲರ್ಸ್ ಆಸ್ಪತ್ರೆ ಆಡಳಿತಾಧಿಕಾರಿ ಫಾ.ರೋಷನ್ ಕ್ರಾಸ್ತಾ, ಸಹಾಯಕ ಆಡಳಿತಾಧಿಕಾರಿ ರೆ. ಫಾ.ರೋಹನ್ ಡಯಾಸ್, ಉಪಪ್ರಾಂಶುಪಾಲರಾದ ಡಾ. ಇ.ಎಸ್.ಜೆ ಪ್ರಭು ಕಿರಣ್, ಡಾ.ವಿಲ್ಮಾ ಡಿ.ಸೋಜ, ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವಡ, ಕಾರ್ಯಕ್ರಮ ಸಂಯೋಜಕ ಡಾ. ಸೂರಜ್ ಕೆ.ವಿ., ಎನ್ಎಸ್ಎಸ್ ಸೇವಾ ಸಂಯೋಜಕ ಡಾ. ದೀರಾಜ್ ಫೆರ್ನಾಂಡಿಸ್ ಹಾಗೂ ಮಾಧ್ಯಮ ಸಮಿತಿ ಸಂಯೋಜಕಿ ಡಾ. ಅನುಷ ಜಿ.ಎಸ್., ದೈಹಿಕ ಶಿಕ್ಷಣ ನಿರ್ದೇಶಕ ಚೆನ್ನಕೇಶವ, ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ. ಡಾಲ್ಪಿನ್ ಕಾರಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
5 ಮತ್ತು 15 ಕಿ.ಮೀ. ಎರಡು ವಿಭಾಗಗಳಲ್ಲಿ ನಡೆದ ಮ್ಯಾರಥಾನ್ ಓಟದಲ್ಲಿ 800 ಕ್ಕೂ ಅಧಿಕ ಮಂದಿ ಪಾಲ್ಗೊಂಡರು. 5ಕಿ.ಮೀ. ಓಟ ಫಾದರ್ ಮುಲ್ಲರ್ ಹೋಮಿಯೋಪಥಿ ಕ್ಯಾಂಪಸ್ನಿಂದ ಬೆಳಿಗ್ಗೆ ಗಂಟೆ 7:15ಕ್ಕೆ ಪ್ರಾರಂಭಗೊಂಡು ಕುತ್ತಾರ್ ಮಾರ್ಗವಾಗಿ ಹಿಂತಿರುಗಿ ಫಾದರ್ ಮುಲ್ಲರ್ ಹೋಮಿಯೋಪಥಿ ಕ್ಯಾಂಪಸ್ನಲ್ಲಿ ಮುಕ್ತಾಯಗೊಂಡಿತು. 15 ಕಿ.ಮೀ. ಓಟ ಬೆಳಗ್ಗೆ ಗಂಟೆ 6:30ಕ್ಕೆ ಫಾದರ್ ಮುಲ್ಲರ್ ಹೋಮಿಯೋಪಥಿ ಕ್ಯಾಂಪಸ್ನಿಂದ ಪ್ರಾರಂಭಗೊಂಡು ಕುತ್ತಾರ್, ತೊಕ್ಕೊಟ್ಟು, ಬೀರಿ, ಮಡ್ಯಾರ್ ಮಾರ್ಗವಾಗಿ ಕ್ಯಾಂಪಸ್ನಲ್ಲಿ ಮುಕ್ತಾಯಗೊಂಡಿತು.