ಕಾಸರಗೋಡು, ನ 13 (DaijiworldNews/DB): ಪೊಲೀಸ್ ಇಲಾಖೆಯಿಂದ ಹಲವು ಸ್ತುತ್ಯಾರ್ಯ ಕಾರ್ಯಗಳು ನಡೆಯುತ್ತಿದ್ದರೂ ಕೆಲವೊಂದು ಘಟನೆಗಳು ಇಲಾಖೆಗೆ ಕಳಂಕ ತರುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥರ ಕೇಂದ್ರ ಕಚೇರಿಯ ತರಬೇತಿ ಕೇಂದ್ರದಲ್ಲಿ ನಡೆದ ಕಾಸರಗೋಡು ಮಹಿಳಾ ಪೊಲೀಸ್ ಠಾಣೆ, ಸೈಬರ್ ಕ್ರೈಂ ಪೊಲೀಸ್ ಠಾಣೆ, ಮೇಲ್ಪರಂಬ ಪೊಲೀಸ್ ಠಾಣೆ ಹಾಗೂ ಬೇಕಲ ಉಪ ವಿಭಾಗೀಯ ಪೊಲೀಸ್ ಕಚೇರಿಯ ಶಂಕುಸ್ಥಾಪನೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲ ಘಟನೆಗಳು ಇಡೀ ಪೊಲೀಸ್ ಇಲಾಖೆಗೆ ಕಳಂಕ ಉಂಟು ಮಾಡಿದೆ. ಆದರೆ ಕೇರಳದ ಪೊಲೀಸ್ ವ್ಯವಸ್ಥೆ ಮಾದರಿಯಾಗಿದೆ. ಇದರಿಂದ ಪೊಲೀಸ್ ಇಲಾಖೆ ಬಗ್ಗೆ ಆರೋಪ ಹೊರಿಸುವುದು ಸರಿ ಅಲ್ಲ. ಪೊಲೀಸ್ ಇಲಾಖೆಯ ಕೀರ್ತಿಯನ್ನು ಹೆಚ್ಚಿಸುವ ಅನೇಕ ಮಾದರಿ ಕಾರ್ಯಗಳು ನಡೆಯುತ್ತಿದ್ದರೂ ಬೆರಳೆಣಿಕೆಯಷ್ಟು ಜನರ ಕಾರ್ಯಗಳು ಇಡೀ ಪೊಲೀಸ್ ಇಲಾಖೆಗೆ ಕಳಂಕ ತಂದಿದೆ ಎಂದರು.
ಸಮಾಜಕ್ಕೆ, ಪೊಲೀಸ್ ಇಲಾಖೆಗೆ ಹಿತವಲ್ಲದ ಕೆಲಸ ಮಾಡುವವರ ಮೇಲೆ ಕರುಣೆ, ದಯೆ ತೋರಲು ಸಾಧ್ಯವಿಲ್ಲ ಎಂದವರು ಇದೇ ವೇಳೆ ಎಚ್ಚರಿಸಿದರು.
ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಪರಾಧ ತನಿಖೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಕೇರಳ ಪೊಲೀಸರು ಸೂಕ್ಷ್ಮ ತನಿಖಾ ಕೌಶಲ್ಯದಿಂದ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.
ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಶಿಲಾಫಲಕ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆ ಯನ್ನು ಶಾಸಕ ಎನ್. ಎ ನೆಲ್ಲಿಕುನ್ನು ಉದ್ಘಾಟಿಸಿದರು. ಡಿವೈಎಸ್ಪಿ ವಿಶ್ವಂಭರನ್ ನಾಯರ್, ಸ್ಪೆಷಲ್ ಬ್ರಾಂಚ್ ಡಿವೈಎಸ್ಪಿ ಪಿ.ಕೆ. ಸುಧಾಕರನ್, ಸೈಬರ್ ಪೊಲೀಸ್ ಠಾಣೆ ಎಸ್.ಎಚ್. ಓ.ಕೆ. ಪ್ರೇಮ್ ಸದನ್, ಕಾಸರಗೋಡು ಮಹಿಳಾ ಪೊಲೀಸ್ ಠಾಣೆ ಎಸ್ಎಚ್ಒ ಪಿ. ಚಂದ್ರಿಕಾ, ಮಧೂರು ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಜಿಲ್ಲಾ ಪಂಚಾಯತ್ ಸದಸ್ಯೆ ಜಾಸ್ಮಿನ್ ಕಬೀರ್, ಮಧೂರು ಪಂಚಾಯತ್ ಸದಸ್ಯೆ ಎಂ.ಸ್ಮಿತಾ, ಕ್ರೈಂ ಬ್ರಾಂಚ್ ಡಿವೈಎಸ್ಪಿ ಸತೀಶ್ ಕುಮಾರ್ ಅಳಕಲ್, ಎಂ. ಸದಾಶಿವನ್, ಎ.ಪಿ. ಸುರೇಶ್ ಮೊದಲಾದವರು ಮಾತನಾಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೆ.ರಾಜು ಸ್ವಾಗತಿಸಿದರು. ಜಿಲ್ಲಾ ಅಪರಾಧ ದಾಖಲೆಗಳ ಬ್ಯೂರೋ ಡಿವೈಎಸ್ಪಿ ಸಿಎ ಅಬ್ದುಲ್ ರಹೀಮ್ ವಂದಿಸಿದರು.