ಉಪ್ಪಿನಂಗಡಿ, ನ 13 (DaijiworldNews/DB): ಕಬ್ಬಿಣದ ಸರಳುಗಳನ್ನು ಹೊತ್ತು ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಉಪ್ಪಿನಂಗಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ ರಾ. ಹೆ. 75ರಲ್ಲಿ ಶನಿವಾರ ರಾತ್ರಿ ನಡೆದಿದೆ. ಪರಿಣಾಮ ಮೂರು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಲಾರಿಯು ಬೆಂಗಳೂರಿನಿಂದ ಮಂಗಳೂರು ಕಡೆಗೆ ಸಂಚಾರ ನಡೆಸುತ್ತಿತ್ತು. ಈ ವೇಳೆ ಹೊಸಮಜಲುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದೆ. ವಾಹನನಿಬಿಢ ಹೆದ್ದಾರಿಯಲ್ಲಿ ಲಾರಿ ಬಿದ್ದಿದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಮೂರು ಗಂಟೆಗಳಿಗೂ ಹೆಚ್ಚು ಕಾಲ ಸಂಚಾರಕ್ಕೆ ತೊಡಕಾಯಿತು. ಸಂಚಾರ ಸುಗಮಗೊಳಿಸಲು ಪೊಲೀಸರು ನೆಲ್ಯಾಡಿ-ಪುತ್ಯೆ ಕೊಕ್ಕಡ ಮಾರ್ಗವಾಗಿ ಪೆರಿಯ ಶಾಂತಿ ಮೂಲಕ ಪ್ರಯಾಣಿಸಲು ವಾಹನ ಸವಾರರಿಗೆ ಅವಕಾಶ ಕಲ್ಪಿಸಿಕೊಟ್ಟರು.
ಘಟನೆ ನಡೆದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಕ್ರೇನ್ ಮೂಲಕ ಲಾರಿಯನ್ನು ಹೆದ್ದಾರಿಯಿಂದ ತೆರವು ಮಾಡುವ ಕಾರ್ಯಾಚರಣೆ ನಡೆಸಿದರು. ಮೂರು ಗಂಟೆಗಳ ಶ್ರಮದ ಬಳಿಕ ಲಾರಿಯನ್ನು ರಸ್ತೆ ಬದಿಗೆ ಸರಿಸಲಾಯಿತು. ಬಳಿಕ ಸಂಚಾರ ಆರಂಭಿಸಲಾಯಿತು. ಘಟನೆಯಲ್ಲಿ ಲಾರಿ ಚಾಲಕನಿಗೆ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.