ಕಾರ್ಕಳ, ನ 12 (DaijiworldNews/DB): ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ. ವ್ಯಸನಕ್ಕೆ ತುತ್ತಾಗುವವರಲ್ಲಿ ವಯೋಮಾನ, ಲಿಂಗ ತಾರತಮ್ಯ ಇರುವುದಿಲ್ಲ. ಶಿಬಿರದಲ್ಲಿ ವ್ಯಸನ ಮುಕ್ತರಾಗುವ ಶಿಬಿರಾರ್ಥಿಗಳು ಮತ್ತೆ ವ್ಯಸನಕ್ಕೆ ಬಲಿಯಾಗದೆ ಶಾಶ್ವತ ವ್ಯಸನ ಮುಕ್ತರಾಗಬೇಕು. ಗೌರವದಿಂದ ಬಾಳಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಕಾರ್ಕಳ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜನಜಾಗೃತಿ ವೇದಿಕೆ ಕಾರ್ಕಳ, ಶ್ರೀ ಮಂಜುನಾಥೇಶ್ವರ ವ್ಯಸನಮುಕ್ತ ಮತ್ತು ಸಂಶೋಧನ ಕೇಂದ್ರ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಬಜಗೋಳಿ ವಲಯ, ರಾಜಪುರ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಕುಕ್ಕುಂದೂರು ಕಾರ್ಕಳ, ಬಿಲ್ಲವ ಸಮಾಜ ಸೇವಾ ಸಂಘ ಬಜಗೋಳಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬಜಗೊಳಿ ವಲಯ, ನವ ಜೀವನ ಸಮಿತಿ ಬಜಗೋಳಿ ವಲಯ, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಊರಿನ ದಾನಿಗಳ ಸಂಯುಕ್ತ ಆಶ್ರಯದಲ್ಲಿ ಬಜಗೋಳಿಯ ಶ್ರೀ ನಾರಾಯಣಗುರು ಸಮುದಾಯ ಮಂದಿರದಲ್ಲಿ ನಡೆದ 1611ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಸ್ ಚಂದ್ರ ಚೌಟ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇ. ಧ. ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಶಿವರಾಯ ಪ್ರಭು, ಅ.ಕಜ.ಜಾ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್ ಅಮೀನ್, ಜಿಲ್ಲಾ ಜನಜಾಗೃತಿ ವೇದಿಕೆ ನಿರ್ದೇಶಕರಾದ ಮಹಾವೀರ ಜೈನ್, ಹರಿಶ್ಚಂದ್ರ ತೆಂಡುಲ್ಕರ್, ಪ್ರೇಮ್ಕುಮಾರ್, ನಲ್ಲೂರು ಗ್ರಾ.ಪಂ ಅಧ್ಯಕ್ಷೆ ಕವಿತಾ ಸಂತೋಷ್ ಪೂಜಾರಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬಜಗೋಳಿ ವಲಯಾಧ್ಯಕ್ಷೆ ಜಯಲಕ್ಷ್ಮಿ, ಕೇಂದ್ರ ಸಮಿತಿ ಒಕ್ಕೂಟ ಅಧ್ಯಕ್ಷ ಪ್ರವೀಣ್ ಹೆಗ್ಡೆ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಶರತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಿಗೆ ಏರ್ಪಡಿಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬೆಳಗ್ಗೆ ಆತ್ಮವಲೋಕನ, ದಾಖಲೀಕರಣ, ನವಜೀವನ ಸಮಿತಿ ರಚನೆ ನಡೆಯಿತು. ಯೋಜನಾಧಿಕಾರಿ ಭಾಸ್ಕರ್ ವಿ. ಸ್ವಾಗತಿಸಿದರು. ಮೇಲ್ವಿಚಾರಕ ಮನೋಜ್ ಹೆಗ್ಡೆ ವಂದಿಸಿದರು. ಸೌಮ್ಯ ಶೆಟ್ಟಿ ನಿರೂಪಿಸಿದರು.