ಬಂಟ್ವಾಳ, ನ 12 (DaijiworldNews/DB): ಯಾಮೊಟೋ ಶೋಟೋಕಾನ್ ಕರಾಟೆ ಅಸೋಸಿಯೇಶನ್ ಮಂಗಳೂರು ಟ್ರಸ್ಟ್, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್, ರೋಟರಿ ಕ್ಲಬ್ ಸಿದ್ದಕಟ್ಟೆ ಪಲ್ಗುಣಿ, ರೋಟರಿ ಕ್ಲಬ್ ಬಿಸಿರೋಡು ಸಿ.ಟಿ., ರೋಟರಿ ಕ್ಲಬ್ ಬಂಟ್ವಾಳ ಮತ್ತು ಮೊಡಂಕಾಪು ರೋಟರಿ ಕ್ಲಬ್ ಆಶ್ರಯದಲ್ಲಿ ಎರಡು ದಿನಗಳ ಕಾಲ ಬಂಟ್ವಾಳದ ಸ್ಪರ್ಶ ಕಲಾದಲ್ಲಿ ನಡೆಯುವ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯನ್ನು ಶಾಸಕ ಯು.ಟಿ. ಖಾದರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸಲು ಅಯೋಜಕರು ಅವಕಾಶ ನೀಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಹಿರಿಯ ಕ್ರೀಡಾಪಟುಗಳಿಗೆ ಇದೊಂದು ಸ್ಪರ್ಧಾತ್ಮಕ ಕ್ರೀಡೆಯಾದರೆ, ಕಿರಿಯ ಕ್ರೀಡಾಪಟುಗಳಿಗೆ ಈ ಕ್ರೀಡಾಕೂಟ ಕಲಿಕೆಯ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣ ಮತ್ತು ಆರೋಗ್ಯವಂತ ಶರೀರ ನಿರ್ಮಾಣ ಮಾಡಲು ಕ್ರೀಡೆ ಅಗತ್ಯ. ಜೊತೆಗೆ ಆತ್ಮರಕ್ಷಣೆಗೆ ಕರಾಟೆ ಬಹು ಅನಿವಾರ್ಯವಾಗಿದೆ ಎಂದು ಹೇಳಿದರು.
ಸಿದ್ದಕಟ್ಟೆ ಶ್ರೀ ಪೂಂಜ ದೇವಸ್ಥಾನದ ಅಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ, ಫಾದರ್ ವಲೇರಿಯನ್ ಡಿಸೋಜ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಜಿಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪುರಸಭಾ ಸದಸ್ಯ ಹರಿಪ್ರಸಾದ್, ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿಸೋಜ, ರೋಟರಿ ಕ್ಲಬ್ ಗೌರವಾಧ್ಯಕ್ಷ ರಾಘವೇಂದ್ರ ಭಟ್, ರೋಟರಿ ಕ್ಲಬ್ನ ಸತೀಶ್, ವಿಜಯ ಫೆರ್ನಾಂಡಿಸ್, ಅಧ್ಯಕ್ಷ ಕ್ಯೋಷಿ ಶ್ಯಾಜು ಮುಲವಾನ, ಕೋಶಾಧಿಕಾರಿ ರೆನ್ನಿ ಜೆರಾಲ್ಡ್ ಫರ್ನಾಂಡೀಸ್, ಜೊತೆ ಕಾರ್ಯದರ್ಶಿ ಸೆನ್ಸಯಿ ಅಶೋಕ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ಸುಮಾರು 1500ಕ್ಕೂ ಅಧಿಕ ಕರಾಟೆಪಟುಗಳು ಭಾಗವಹಿಸಿದ್ದು, ಕಟ ಹಾಗೂ ಕುಮಿಟೆ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಿತು.