ಮಂಗಳೂರು,ಫೆ 22(MSP): ದಕ್ಷಿಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಮೊಬೈಲ್ ಕಳ್ಳತನ ಪ್ರಕರಣದ ಆರೋಪಿ ಜಗದೀಶ್ ಶೆಟ್ಟಿ ಎಂಬಾತನನ್ನು ಗುರುವಾರ ಬಂಧಿಸಿರುವ ಪೊಲೀಸರು, ಆತನಿಂದ 6 ಮೊಬೈಲ್ ಸೇರಿದಂತೆ ಒಟ್ಟು ರೂ 48ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದೇ 17 ರಂದು ನಗರದ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಚೈತನ್ಯಾ ಮತ್ತು ಪರಿವಾರ ಹೋಟೆಲ್ ಮಧ್ಯದ ಅಂಗಡಿಯ ಜಗಲಿಯಲ್ಲಿ ಮಲಗುವ ಸಮಯ ಪಕ್ಕದಲ್ಲಿ ಇಟ್ಟಿದ್ದ ರೂ.48ಸಾವಿರ ಮೌಲ್ಯದ 6 ಮೊಬೈಲ್ಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಧರ್ಮ ಎಂಬುವವರು ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಮೂಡುಬಿದಿರೆಯ, ಕರಿಂಜೆ ಗ್ರಾಮದ, ಒಡಾರಿಬೆಟ್ಟು ತಾಕೋಡೆಯ ಜಗದೀಶ್ ಶೆಟ್ಟಿ ಎಂಬಾತನನ್ನು ಬಂಧಿಸಿದ್ದಾರೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಸಬ್ ಇನ್ಸ್ಪೆಕ್ಟರ್ ಮಂಜುಳಾ ಎಲ್. ಹಾಗೂ ಸಿಬ್ಬಂದಿ ಆರೋಪಿಯು ಬಿಜೈ ನ ಕೆ.ಎಸ್ ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಇರುವ ಖಚಿತ ಮಾಹಿತಿ ಪಡೆದು ಬಂಧಿಸಿದ್ದಾರೆ. ಆರೋಪಿ ಜಗದೀಶ ಮೇಲೆ ಮೂಡುಬಿದಿರೆ ಠಾಣೆಯಲ್ಲಿ 2 ಮನೆಗಳ್ಳತನ, 1 ಗಾಂಜಾ ಮಾರಾಟ ಪ್ರಕರಣ, ಮೈಸೂರು ಲಷ್ಕರ್ ಪೊಲೀಸ್ ಠಾಣೆಯಲ್ಲಿ 1 ಮನೆ ಕಳ್ಳತನ ಪ್ರಕರಣ, ಮಂಗಳೂರು ರೈಲ್ಪೆ ಪೊಲೀಸ್ ಠಾಣೆಯಲ್ಲಿ 2 ಮೊಬೈಲ್ ಕಳ್ಳತನ ಪ್ರಕರಣ ದಾಖಲಾಗಿವೆ.