ಮಂಗಳೂರು, ನ 11 (DaijiworldNews/SM): ಕನ್ನಡ ಚಿತ್ರರಂಗದಲ್ಲಿ ಧೂಳೆಬ್ಬಿಸಿರುವ ಕಾಂತಾರಾ ಸಿನಿಮಾ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಈ ನಡುವೆ ಕಾಂತಾರ ಸಿನಿಮಾಕ್ಕೆ ಇದೀಗ ಸಂಕಷ್ಟವೊಂದು ಎದುರಾಗಿದೆ. ಜಾತಿ ನಿಂದನೆಯ ತೂಗುಗತ್ತಿಯೊಂದು ಚಿತ್ರ ತಂಡದ ಸುತ್ತ ಹೆಣಗಾಡುತ್ತಿದೆ. ‘ಕಾಂತಾರ’ದಲ್ಲಿ ದೈವಾರಾಧನೆಯಲ್ಲಿ ತೊಡಗಿರುವ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯವನ್ನು ಅತ್ಯಂತ ಕೀಳಾಗಿ ಚಿತ್ರಿಸಿ ಅವಮಾನ ಮಾಡಲಾಗಿದೆ ಎಂಬುವುದು ಸದ್ಯ ಕೇಳಿಬರುತ್ತಿರುವ ಆರೋಪ.
ದೈವಾರಾಧನೆಯನ್ನು ವಿಕೃತಗೊಳಿಸಿ ಹಿಂಸೆಯನ್ನು ಪ್ರಚೋದಿಸಲಾಗಿದೆ ಎಂದು ಸಮತಾ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಈ ಚಲನ ಚಿತ್ರದಲ್ಲಿರುವ ಎಲ್ಲಾ ಆಕ್ಷೇಪಾರ್ಹ ದೃಶ್ಯಗಳನ್ನು ತಕ್ಷಣವೇ ತೆಗೆದು ಹಾಕಬೇಕೆನ್ನುವುದು ಅವರ ವಾದ. ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಬೇಕು. ಮತ್ತು ಅಲ್ಲಿಯವರೆಗೆ ಚಿತ್ರದ ಸಾರ್ವಜನಿಕ ಪ್ರದರ್ಶನವನ್ನು ಸ್ಥಗಿತಗೊಳಿಸಲು ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ ವ್ಯಕ್ತಿಗಳು ಮತ್ತು ಸಂಘಟನೆಗಳ ಮೂಲಕ ದ.ಕ. ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವುದಾಗಿ ಅವರು ಹೇಳಿದರು.
‘ಕಾಂತಾರ’ ಚಲನಚಿತ್ರದ ಹಲವಾರು ದೃಶ್ಯಗಳಲ್ಲಿ ತುಳುನಾಡಿನ ಸಂಸ್ಕೃತಿಯ ಮಹತ್ವ ಪೂರ್ಣ ಭಾಗವಾಗಿರುವ ದೈವಾರಾಧನೆಯಲ್ಲಿ ತೊಡಗಿರುವ ಪರಿಶಿಷ್ಟ ಜಾತಿಗೆ ಸೇರಿದ ದೈವಗಳ ನರ್ತಕ ಸಮುದಾಯವನ್ನು, ಅದರಲ್ಲೂ ಮುಖ್ಯವಾಗಿ ಮಹಿಳೆಯರನ್ನು ಮತ್ತು ಯುವ ಜನರನ್ನು, ಅತ್ಯಂತ ಕೀಳಾಗಿ ಚಿತ್ರೀಕರಿಸಿ ಅವಮಾನ ಮಾಡಲಾಗಿದೆ ಎಂದು ಅವರು ಆರೋಪಿಸಿದರು.