ಉಳ್ಳಾಲ, ನ 11 (DaijiworldNews/DB): ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಭಾಗಿತ್ವದಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ನವೆಂಬರ್ 13ರಂದು ಮ್ಯಾರಥಾನ್ 'ಮುಲ್ಲರ್ ರನ್' ಆಯೋಜಿಸಲಾಗಿದೆ ಎಂದು ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆಯ ಆಡಳಿತಾಧಿಕಾರಿ ವಂ| ರೋಶನ್ ಕ್ರಾಸ್ತಾ ತಿಳಿಸಿದ್ದಾರೆ.
ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆಯಲ್ಲಿ `ಮುಲ್ಲರ್ ರನ್' ಜರ್ಸಿ ಬಿಡುಗಡೆ ಮಾಡಿ ಮಾತನಾಡಿದ ಆವರು, ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆ ವಿವಿಧ ಆರೋಗ್ಯ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಇದಕ್ಕೆ ಪೂರಕವಾಗಿ ವಿಶ್ವ ಮಧುಮೇಹ ದಿಮದ ಅಂಗವಾಗಿ 'ಮುಲ್ಲರ್ ರನ್' ಮ್ಯಾರಥಾನ್ ಓಟ ಆಯೋಜಿಸಲಾಗಿದೆ. 5 ಮತ್ತು 15 ಕಿ.ಮೀ. ಎರಡು ವಿಭಾಗವಿದ್ದು, 5ಕಿ.ಮೀ. ಓಟ ಫಾದರ್ ಮುಲ್ಲರ್ ಹೋಮಿಯೋಪಥಿ ಕ್ಯಾಂಪಸ್ನಿಂದ ಬೆಳಗ್ಗೆ 7.15ಕ್ಕೆ ಪ್ರಾರಂಭಗೊಂಡು ಕುತ್ತಾರ್ ಮಾರ್ಗವಾಗಿ ಹಿಂತಿರುಗಿ ಫಾದರ್ ಮುಲ್ಲರ್ ಹೋಮಿಯೋಪಥಿ ಕ್ಯಾಂಪಸ್ನಲ್ಲಿ ಮುಕ್ತಾಯಗೊಳ್ಳಲಿದೆ. 15 ಕಿ.ಮೀ. ಓಟ ಬೆಳಗ್ಗೆ 6.30ಕ್ಕೆ ಫಾದರ್ ಮುಲ್ಲರ್ ಹೋಮಿಯೋಪಥಿ ಕ್ಯಾಂಪಸ್ನಿಂದ ಪ್ರಾರಂಭಗೊಂಡು ಕುತ್ತಾರ್, ತೊಕ್ಕೊಟ್ಟು , ಬೀರಿ, ಮಡ್ಯಾರ್ ಮಾರ್ಗವಾಗಿ ಕ್ಯಾಂಪಸ್ನಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಮಂಗಳೂರಿನ ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಗೀತಾ ಕುಲಕರ್ಣಿ ಉದ್ಘಾಟಿಸಲಿದ್ದು, ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ| ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಮ್ಯಾರಥಾನ್ನಲ್ಲಿ ಭಾಗವಹಿಸಲು ಈಗಾಗಲೇ 800ಕ್ಕೂ ಅಧಿಕ ಓಟಗಾರರು ಹೆಸರು ನೋಂದಾಯಿಸಿಕೊಂಡಿದ್ದು, ಎರಡು ವಿಭಾಗಗಳ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ, ಆರೋಗ್ಯ ತಪಾಸಣೆ ವೋಚರ್ ಹಾಗೂ ಗಿಫ್ಟ್ ಹ್ಯಾಂಪರ್ನೊಂದಿಗೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಬಹುಮಾನಗಳನ್ನು ನೀಡಲಾಗುವುದು. ಎಲ್ಲಾ ಮ್ಯಾರಥಾನ್ ಫಿನಿಶರ್ಗಳಿಗೆ ಅವರ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಮ್ಯಾರಥಾನ್ ಓಟದ ಜೊತೆಗೆ ವಿಶ್ವ ಮಧುಮೇಹ ದಿನದ ಅಂಗವಾಗಿ ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ಮಧುಮೇಹ ಮತ್ತು ಆಹಾರ ಪದ್ಧತಿಯ ಬಗ್ಗೆ ನವಂಬರ್ 14ರಿಂದ 19ರವರೆಗೆ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಒಂದು ವಾರದ ಆರೋಗ್ಯ ಶಿಬಿರ ಮತ್ತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಉಚಿತ ಶುಗರ್ ಪರೀಕ್ಷೆ ಹಾಗೂ ಮಧುಮೇಹಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ಶೇ. 50 ರಿಯಾಯಿತಿ ದರದಲ್ಲಿ ಮಾಡಲಾಗುವುದು ಎಂದರು.
ಸಹಾಯಕ ಆಡಳಿತಾಧಿಕಾರಿ ರೆ| ಫಾ| ರೋಹನ್ ಡಯಾಸ್, ಉಪ ಪ್ರಾಂಶುಪಾಲರಾದ ಡಾ| ಇ.ಎಸ್.ಜೆ ಪ್ರಭು ಕಿರಣ್, ಡಾ| ವಿಲ್ಮಾ ಡಿ.ಸೋಜ, ವೈದ್ಯಕೀಯ ಅಧೀಕ್ಷಕ ಡಾ| ಗಿರೀಶ್ ನಾವಡ, ಕಾರ್ಯಕ್ರಮ ಸಂಯೋಜಕ ಡಾ| ಸೂರಜ್ ಕೆ.ವಿ., ಎನ್ಎಸ್ಎಸ್ ಸೇವಾ ಸಂಯೋಜಕ ಡಾ| ಧೀರಜ್ ಫೆರ್ನಾಂಡಿಸ್, ಮಾಧ್ಯಮ ಸಮಿತಿ ಸಂಯೋಜಕಿ ಡಾ| ಅನುಷ ಜಿ.ಎಸ್., ದೈಹಿಕ ಶಿಕ್ಷಣ ನಿರ್ದೇಶಕ ಚೆನ್ನಕೇಶವ, ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ| ಡಾಲ್ಪಿನ್ ಕಾರಟ್ ಉಪಸ್ಥಿತರಿದ್ದರು.