ಮೂಡುಬಿದಿರೆ,ಫೆ 22(MSP): ಸುತ್ತಮುತ್ತಲಿನ ಬಾವಿಗಳೆಲ್ಲ ಬರಡಾಗುವ ಸಮಯ. ಆದರೆ ಪಾಲಡ್ಕ ಗ್ರಾಮದ ಬಾವಿಯೊಂದರಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ಮೂಲಕ ಅಚ್ಚರಿಗೆ ಕಾರಣವಾಗಿದೆ. ಪ್ರಕೃತಿಯ ವಿಸ್ಮಯ, ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿದೆ.
ಪಾಲಡ್ಕ ಸಂತ ಇಗ್ನೇಶಿಯಸ್ ಚರ್ಚ್, ಶ್ರೀ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನದ ಸಮೀಪವಿರುವ ಸತೂರ್ನಿ - ವೀಣಾ ಡಿ’ಸಿಲ್ವಾ ದಂಪತಿಯ ಮನೆಯ ಬಾವಿಯಲ್ಲಿ ಬುಧವಾರ ನೀರು ದಿಢೀರ್ ಏರಿಕೆಯಾಗಿದೆ. ಕೆಲವೇ ದಿನದಲ್ಲಿ ನೀರು ಕಡಿಮೆಯಾಗುವ ಹಂತದಲ್ಲಿದ್ದ ಬಾವಿಯ ನೀರು, ಒಮ್ಮೆಗೆ ಹೆಚ್ಚಾಗುವ ಮೂಲಕ ಕುಟುಂಬದವರಿಗೆ ಅಚ್ಚರಿಯ ಜೊತೆಗೆ ಖುಷಿಯನ್ನು ನೀಡಿದೆ. ಎರಡು ವರ್ಷಗಳ ಹಿಂದೆ ತೋಡಲಾದ 50 ಅಡಿ ಬಾವಿಯಲ್ಲಿ ಈಗಿನ ಬಿಸಿಲಿನ ಬೇಗೆಗೆ ನೀರಿನ ಮಟ್ಟ ತೀರಾ ಕುಸಿಯುವುದರಲ್ಲಿತ್ತು. ಕಳೆದ ವರ್ಷ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಆದರೆ ಬುಧವಾರ ಕೇವಲ ಮೂರು ರಿಂಗಿನ ಮಟ್ಟದಲ್ಲಿ ಇದ್ದ ನೀರು ಬುಧವಾರ ಮುಂಜಾನೆಯಿಂದ ಏಕಾಏಕಿ ಏರಿಕೆಯಾಗಿದೆ. ಬುಧವಾರ 19 ಅಡಿಗಳಷ್ಟು ನೀರಿನ ಮಟ್ಟ ಏರಿಕೆಯಾಗಿದ್ದು, ಗುರುವಾರ ಕೂಡ ನೀರು ಅಷ್ಟೇ ಮಟ್ಟದಲ್ಲಿದೆ. ಪರಿಸರದ ಇತರ ಬಾವಿಗಳಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿತಗೊಂಡಿದ್ದು, ಕೇವಲ ಇದೊಂದು ಬಾವಿಯಲ್ಲಿ ಮಾತ್ರ ನೀರು ಏರಿಕೆಯಾಗಿರುವುದರಿಂದ ಸ್ಥಳೀಯರು ಕುತೂಹಲದಿಂದ ನೋಡಲು ಬರುತ್ತಿದ್ದಾರೆ.
ಕಂಚಿಬೈಲು ಅಣೆಕಟ್ಟು ಪ್ರಭಾವ?
ಪುತ್ತಿಗೆ ಕಂಚಿಬೈಲು ಎರುಗುಂಡಿ ಎಂಬಲ್ಲಿ, ಪಾಲಡ್ಕ ಚರ್ಚ್ನ ಧರ್ಮಗುರುಗಳ ಮಾರ್ಗದರ್ಶನದಲ್ಲಿ ಸರ್ವಧರ್ಮದ ಗ್ರಾಮಸ್ಥರ ನೆರವಿನಿಂದ ಕಂಚಿಬೈಲು ಅಣೆಕಟ್ಟು ಕೆಲಸರಡು ವರ್ಷಗಳ ಪ್ರಾರಂಭಗೊಂಡಿತು. ಅಂದಿನ ಶಾಸಕ ಅಭಯಚಂದ್ರ ಜೈನ್ ಅವರ ಮುತುವರ್ಜಿಯಲ್ಲಿ ಒಂದು ಕೋಟಿ ರೂಪಾಯಿ ಅನುದಾನದಲ್ಲಿ ಅಣೆಕಟ್ಟು ನಿರ್ಮಾಣಗೊಂಡು ಕಳೆದ ಜನವರಿಗೆಯಲ್ಲಿ ಈಗಿನ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದ್ದರು. ಪುತ್ತಿಗೆ, ಕಲ್ಲಮುಂಡ್ಕೂರು, ಪಾಲಡ್ಕ ಗ್ರಾಮದ ಕೃಷಿಕರ ನೀರಿನ ಕೊರತೆಯನ್ನಿ ನೀಗಿಸಲು ನಿರ್ಮಿಸಲಾದ ಅಣೆಕಟ್ಟುವಿನಿಂದಾಗಿ ತಮ್ಮ ಮನೆಯವ ಬಾವಿಯ ನೀರು ಏರಿಕೆಯಾಗಿರಬಹುದೆನ್ನುವುದು ಸತೂರ್ನಿ ಕುಟುಂಬದ ಸದಸ್ಯರ ಅಭಿಪ್ರಾಯ.
ಸತೂರ್ನಿ ಡಿಸಿಲ್ವಾ ಹೊರದೇಶದಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗಷ್ಟೇ ವಾಪಸ್ಸಾಗಿ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಹೊರದೇಶದಲ್ಲಿ ದುಡಿದ ಹಣದ ಒಂದು ಪಾಲನ್ನು ಊರಿನ ನಿಶಕ್ತ ಕುಟುಂಬಗಳಿಗೆ ದಾನದ ರೂಪದಲ್ಲಿ ಹಂಚುತ್ತಿದ್ದಾರೆ. ತಮ್ಮ ಬಾವಿ ನೀರನ್ನು ಸ್ಥಳೀಯರಿಗೆ ಹಂಚುತ್ತಿದ್ದಾರೆ. ಈಗಾಗಿ ದಾನದ ಪುಣ್ಯದ ಫಲವಾಗಿ ದೇವರು ನೀರನ್ನು ಹರಿಸಿದ್ದಾನೆ ಎನ್ನುವುದು ಈ ಕುಟುಂಬದ ಸದಸ್ಯರ ನಂಬಿಕೆ. ಬಾವಿ ಸಮೀಪವೇ ನೀರಿನ ದೊಡ್ಡಿ ನಿರ್ಮಿಸಿ ಜಾನುವಾರು ಮತ್ತು ಪ್ರಾಣಿ ಪಕ್ಷಿಗಳಿಗೆ ನೀರು ಒದಗಿಸುವ ಉದ್ದೇಶವೂ ಕುಟುಂಬದಾಗಿದೆ.
ಹತ್ತು ವರ್ಷಗಳ ಹಿಂದೆ ನಾನು ಹಾಗೂ ನನ್ನ ಅಣ್ಣ ಸತೂರ್ನಿ ಡಿ’ಸಿಲ್ವಾ ಈ ಪ್ರದೇಶದಲ್ಲಿ ಜಾಗ ಖರೀದಿಸಿ ಮನೆ ಮಾಡಿದ್ದೇವೆ. ಸಣ್ಣ ಪ್ರಮಾಣದಲ್ಲಿ ಕೃಷಿಯನ್ನು ಕೂಡ ಮಾಡುತ್ತಿದ್ದೇವೆ. ಬೇಸಿಗೆಕಾಲದಲ್ಲಿ ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದಕ್ಕಾಗಿ ಕೊಳವೆಬಾವಿಗಳನ್ನು ಕೂಡ ಸ್ಥಳೀಯರು ತೋಡಿದ್ದಾರೆ. ಆದರೆ ಬಾವಿಯಲ್ಲಿ ದಿಢೀರ್ ಏರಿಕೆಯಾಗಿರುವುದರಿಂದ ನಮಗೆ ಅಚ್ಚರಿ, ಖುಷಿ ಆಗಿದೆ. ದೇವರ ಕೃಪೆಯಾದ ನೀರನ್ನು ಸ್ಥಳೀಯರಿಗೂ ಹಂಚುತ್ತೇವೆ ಎನ್ನುತ್ತಾರೆ ಅಮಿತ್, ಸತೂರ್ನಿ ಡಿ’ಸಿಲ್ವಾ ಅವರ ಸಹೋದರ