ಕಾರ್ಕಳ, ನ 11 (DaijiworldNews/MS): ನಗರದ ಕಾಬೆಟ್ಟು ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಶಿಲಾನ್ಯಾಸ ಸಮಾರಂಭವನ್ನು ದಲಿತ ಸಂಘಟನೆಗಳು ಬಹಿಷ್ಕರಿಸಲಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಅಣ್ಣಪ್ಪ ನಕ್ರೆ ಹೇಳಿದ್ದಾರೆ.
ಅವರು ಹೊಟೇಲ್ ಪ್ರಕಾಶ್ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಇಪ್ಪತ್ತು ಸದಸ್ಯರನ್ನೊಳಗೊಂಡ ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯನ್ನು ಶಾಸಕರ ಶಿಫಾರಸ್ಸಿನಂತೆ ಮಾಡಲಾಗಿತ್ತು. ೨೦೧೪ರಿಂದ ಅಂಬೇಡ್ಕರ್ ಭವನ ನಿರ್ಮಾಣದ ಕುರಿತು ಕಾನೂನಾತ್ಮಕ ರೀತಿಯ ಹೋರಾಟಗಳನ್ನು ಕೂಡಾ ನಡೆಸುತ್ತಾ ಬರಲಾಗಿತ್ತು. ಆದರೆ ಪ್ರಸ್ತುತ ಸಭಾಭವನ ನಿರ್ಮಾಣಕ್ಕೆ ಅನುದಾನವನ್ನು ಮಂಜೂರಾತಿಗೊಳಿಸಿ ಸರಕಾರ ಆದೇಶಿಸಿದೆ. ಆದರೆ ಈ ಸಭಾಭವನ ನಿರ್ಮಾಣದಲ್ಲಿ ದಲಿತ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಕೈಗೊಂಡ ನಿರ್ಣಯಗಳಿಗೆ ನಮ್ಮ ವಿರೋಧವಿದೆ. ಕ್ಷೇತ್ರದ ಶಾಸಕ, ಸಚಿವ ವಿ.ಸುನಿಲ್ ಕುಮಾರ್ ಹಾಗೂ ತಾಲೂಕು ಆಡಳಿತ ನಮ್ಮನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಇದು ರಾಜಕೀಯಕ್ಕಾಗಿ ಮಾಡುವ ಆರೋಪ ಅಲ್ಲ, ಇದು ದಲಿತ ಸಮುದಾಯದ ನಿವೇದನೆಯಾಗಿದೆ ಎಂದು ಹೇಳಿದರು.
ಆರೋಪಗಳೇನು?
* ಅಂಬೇಡ್ಕರ್ ಭವನ ಶಿಲಾನ್ಯಾಸ ಕಾರ್ಯಕ್ರಮಕ್ಕೆ ದಲಿತ ಪರ ಸಂಘಟನೆಗಳನ್ನು ಅವಗಣಿಸುವ ಮೂಲಕ ದಲಿತ ಸಮುದಾಯಕ್ಕೆ ಅವಮಾನ.
* ವಿವಿಧ ದಲಿತ ಸಮಿತಿಗಳ ಪೂರ್ವಭಾವಿ ಸಭೆ ನಡೆಸದೆ, ಸಮಿತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಡೆಗಣಿಸಿರುವುದು.
* ಆಮಂತ್ರಣ ಪತ್ರಿಕೆಗಳಲ್ಲಿ ಕಾನೂನಾತ್ಮಕ ಹೋರಾಟ ನಡೆಸಿದ ದಲಿತ ಸಂಘರ್ಷ ಸಮಿತಿ ಅಥವಾ ಅದರ ಸದಸ್ಯರನ್ನು ಕಡೆಗಣಿಸಲಾಗಿದೆ. ಜತೆಗೆ ಪುರಸಭಾ ಚುನಾಯಿತ ದಲಿತ ಸದಸ್ಯರನ್ನು ಕೂಡಾ ನಿರ್ಲಕ್ಷಿಸಲಾಗಿದೆ.
* ಸಚಿವರ ಸ್ವಗೃಹದಲ್ಲಿ ಅಂಬೇಡ್ಕರ್ ಭವನದ ಶಿಲಾನ್ಯಾಸ ಕಾರ್ಯಕ್ರಮದ ಬಗ್ಗೆ ಚರ್ಚಿಸಲು ತಮ್ಮ ಪಕ್ಷದ ಕಾರ್ಯಕರ್ತರ ಸಮಿತಿ ಸಭೆಯನ್ನು ಕರೆಯಲಾಗಿತ್ತು. ಈ ಬಗ್ಗೆ ಚರ್ಚಿಸಲು ದಲಿತ ಸಂಘಟನೆಗಳನ್ನು ಆಮಂತ್ರಿಸಿಲ್ಲ.
* ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎಸ್ಸಿ/ಎಸ್ಟಿ ವಸತಿ ಯೋಜನೆಯಡಿ ಪ್ರತೀ ಫಲಾನುಭವಿಗಳಿಗೆ ಉಚಿತ ೫ ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದ್ದರು. ಆದರೆ ವರ್ಷ ಕಳೆದರೂ ಅನುಷ್ಟಾನವಾಗಿಲ್ಲ. ಇದು ಸರಕಾರದ ದಲಿತ ವಿರೋಧಿ ಧೋರಣೆಗೆ ಸಾಕ್ಷಿ.
ದಸಂಸ ತಾಲೂಕು ಆಧ್ಯಕ್ಷ ಹೂವಪ್ಪ ಮಾಸ್ತರ್, ಸಂಚಾಲಕ ರಾಘವ ಕಡ್ತಲ, ಖಜಾಂಚಿ ಸೋಮನಾಥ್ ನಾಯ್ಕ್, ಅಂಬೇಡ್ಕರ್ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಗೋವರ್ಧನ್, ಸಮತಾ ಸೈನಿಕ ದಳದ ಅಧ್ಯಕ್ಷ ಗಜೇಂದ್ರ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.