ಮಂಗಳೂರು, ಫೆ 21(SM): ಮೂಡುಬಿದಿರೆ ಪೊಲೀಸ್ ಠಾಣಾ ಹಾಗೂ ಕಾಸರಗೋಡಿನ ಅದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಸರಕಳ್ಳರಿಬ್ಬರನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಗೂ ಬಂಧಿತ ಆರೋಪಿಗಳಿಂದ ಸುಲಿಗೆಗೈದ ಚಿನ್ನಾಭರಣ ಹಾಗೂ ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರಿನ ಕಣ್ಣೂರು ಗ್ರಾಮದ ಕೆ ನೂಮನ್(23), ಸಂಶೀರ್ ಯಾನೆ ತಂಜೀ(21) ಬಂಧಿತ ಆರೋಪಿಗಳು.
ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಸರಕಳ್ಳತನ ಹಾಗೂ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಸಮಯ ಸರಕಳ್ಳತನ ಮಾಡುವ ಇಬ್ಬರು ಯುವಕರು ನೊಂದಾಣೆ ಸಂಖ್ಯೆ ಅಳವಡಿಸದೇ ಇರುವ ದ್ವಿಚಕ್ರ ವಾಹನದಲ್ಲಿ ಮೂಡಬಿದ್ರಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದಾರೆಂಬ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದ್ವಿಚಕ್ರ ವಾಹನವನ್ನು ಬೆನ್ನಟ್ಟಿ ಹಿಡಿದು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತರ ವಿರುದ್ಧ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಅದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಾರು ಎಂಬಲ್ಲಿ ಫೆಬ್ರವರಿ 17ರಂದು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಚೈನ್ ನ್ನು ಸುಲಿಗೆ ಮಾಡಿದ ಪ್ರಕರಣ, ಬಂಟ್ವಾಳ ಗ್ರಾಮಾಂತರ, ಬಂಟ್ವಾಳ ನಗರ ಠಾಣೆ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ತಲಾ 2 ಸರಕಳ್ಳತನ ಪ್ರಕರಣ, ಮಂಗಳೂರು ಪೂರ್ವ ಹಾಗೂ ಬರ್ಕೆ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಸರಕಳ್ಳತನ ಹೀಗೆ ಒಟ್ಟು 8 ಪ್ರಕರಣ ದಾಖಲಾಗಿವೆ.