ಬಂಟ್ವಾಳ, ನ 10 (DaijiworldNews/MS): ಆಡಳಿತ ಪಕ್ಷ ವಿರೋಧ ಪಕ್ಷದ ಸದಸ್ಯರುಗಳು ಜತೆಯಾಗಿ ಪುರಸಭಾ ಅಧಿಕಾರಿಗಳ ಅವ್ಯವಹಾರ, ಸದಸ್ಯರಿಗೆ ಅಗೌರವ ನೀಡುವ ಅಧಿಕಾರಿಗಳು, ಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಉದ್ದಟತನದ ವರ್ತನೆ, ತುಕ್ಕುಹಿಡಿದ ಆಡಳಿತ ಯಂತ್ರ ಹಾಗೂ ಅವ್ಯವಸ್ಥೆಯ ಪರಮಾವಧಿಯಲ್ಲಿರುವ ಬಗ್ಗೆ ಗರಂ ಆಗಿ ಸಾಮಾನ್ಯ ಸಭೆಯಲ್ಲಿ ಒಕ್ಕೊರಲಿನಿಂದ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಘಟನೆ ನಡೆದಿದೆ.
ಇಂದು ಪುರಸಭಾ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ಅಧ್ಯಕ್ಷ ತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ವರ್ತನೆಯಿಂದ ಆಗಿರುವ ಪ್ರಮಾದಗಳ ಬಗ್ಗೆ ಸ್ವತಃ ಪುರಸಭಾ ಅಧ್ಯಕ್ಷರೆ ಸಭೆಯ ಗಮನಕ್ಕೆ ತಂದರು. ಪುರಸಭಾ ಸಾಮಾನ್ಯ ಸಭೆಯಲ್ಲಿ ಅಗುವ ಯಾವುದೇ ನಿರ್ಣಯಗಳು, ಯೋಜನೆಗಳು ಕಾರ್ಯರೂಪಕ್ಕೆ ಬರುವುದಿಲ್ಲ ಎಂದಾದರೆ ನಾವು ಯಾಕೆ ಸಭೆಗೆ ಹಾಜರಾಗಬೇಕು ಎಂದು ಸಭೆಯಲ್ಲಿ ಸದಸ್ಯರು ಅಧಿಕಾರಿಗಳನ್ನು ಕೇಳಿದರು.
ತ್ಯಾಜ್ಯ ಗಳು ರಸ್ತೆ ಬದಿಯಲ್ಲಿ ರಾಶಿ ಬಿದ್ದಿದೆ, ಮೆಲ್ಕಾರ್ ನಲ್ಲಿ ಹೋಟೆಲ್ ಗಳ ನೀರು ರಸ್ತೆಗೆ ಬಿಡುತ್ತಿದ್ದಾರೆ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ರು ಆಕ್ರೋಶ ವ್ಯಕ್ತಪಡಿಸಿದರು. ಪೋಲೀಸ್ ದೂರು ಕೊಡಿ ಎಂದರೆ ನಿಮಗೆ ಒತ್ತಡ ಬರುತ್ತದೆ, ಒಲೈಕೆಗೆ ಕಟ್ಟಿಬಿದ್ದ ನೀವು ಜನರ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿದ್ದಿರಿ. ಡೆಂಗ್ಯೂ, ಮಲೇರಿಯಾದಂತಹ ಮಾರಕ ಕಾಯಿಲೆಗಳು ಬರುತ್ತಿದ್ದರೂ ಪುರಸಭೆ ಮಾತ್ರ ನಿದ್ದೆಯಲ್ಲಿದೆ ಎಂದು ಸದಸ್ಯ ರು ಪುರಸಭೆಯ ಉದಾಸೀನ ಮನೋಭಾವದ ಬಗ್ಗೆ ಎಚ್ಚರಿಕೆ ನೀಡಿದರು.
ಪುರಸಭಾ ವ್ಯಾಪ್ತಿಯ ರಸ್ತೆಯ ಬದಿಯಲ್ಲಿರುವ ಪೊದೆಗಳನ್ನು, ಹುಲ್ಲು ಗಿಡಗಳನ್ನು ತೆರವು ಮಾಡಲು ಅನೇಕ ಬಾರಿ ಸಭೆಯಲ್ಲಿ ಸದಸ್ಯರು ಹೇಳಿದರು ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕಟ್ಟಿಂಗ್ ಮಿಷನ್ ತರಿಸಿದ ಮಿಷನ್ ನ ಬಿಲ್ ಪಾವತಿ ಮಾಡದೆ ಬಾಕಿಯಾಗಿದೆ. ನಾವು ಕೆಲಸ ಮಾಡಿಸುವುದು ಹೇಗೆ ಎಂದು ಅಧ್ಯಕ್ಷರು ಸದಸ್ಯರಲ್ಲಿ ಕೇಳಿದರು. ಇಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡಿಸುವುದು ಎಂದು ಬೇಸರ ವ್ಯಕ್ತಪಡಿಸಿದರು.
ಪುರಸಭೆಯ ಎರಡು ಸರಕಾರಿ ವಾಹನಗಳಲ್ಲಿ ಅಧಿಕಾರಿಗಳು ವಿನಾಕಾರಣ ತಿರುಗಾಡುತ್ತಿರಿ..? ಏನು ಅದಕ್ಕೆ ತೆರಿಗೆ ಹಣವನ್ನು ಖರ್ಚು ಮಾಡುವುದಲ್ವಾ ಇದು ಸರಿಯಾ? ಪುರಸಭಾ ವ್ಯಾಪ್ತಿಯಲ್ಲಿರುವ ತ್ಯಾಜ್ಯ, ಗಬ್ಬು ವಾಸನೆಯಿಂದ ಚರಂಡಿ ನೀರು ತುಂಬಿದೆ, ಈ ಬಗ್ಗೆ ಎಷ್ಟು ದೂರು ನೀಡಿದರು ಪುರಸಭಾ ಅಧಿಕಾರಿಗಳು ಸ್ಪಂದನೆ ನೀಡದೆ , ಬೇರೆಯವರಿಗೆ ಬೆರಳು ತೋರಿಸಿ ಕರ್ತವ್ಯದಿಂದ ನುಣುಚಿಕೊಳ್ಳುವ ಮೂಲಕ ಸದಸ್ಯರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಿರಿ ಎಂದು ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ದಿನಾಚರಣೆ ಹೆಸರಿನಲ್ಲಿ ಸಾವಿರಾರು ರೂ ಖರ್ಚು ಮಾಡಿದ ಬಗ್ಗೆ ಸಭೆಗೆ ಸ್ಪಷ್ಟನೆ ನೀಡುವಂತೆ ಸದಸ್ಯ ಮೋನಿಶ್ ಆಲಿ ಪ್ರಶ್ನಿಸಿದರು. ಪುರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಬೀದಿ ಬದಿ ವ್ಯಾಪಾರಗಳು ನಡೆಯುತ್ತಿದೆ. ಇದನ್ನು ತೆರವು ಮಾಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ತಾಲೂಕು ಪಂಚಾಯತ್ ಕಟ್ಟಡವನ್ನು ತೆರವು ಮಾಡಲು ಅದೇಶವಾಗಿದ್ದು, ಪ್ರಸ್ತುತ ನ್ಯಾಯಾಲಯದ ಲ್ಲಿದೆ , ಅಂಗಡಿ ಕೋಣೆಗಳಿಗೆ ಪರವಾನಗಿ ಯನ್ನು ನವೀಕರಣ ಮಾಡದಂತೆ ಅದೇಶವಿದೆ , ಆದರೆ ಅನಧಿಕೃತವಾಗಿ ಅಂಗಡಿ ಹಾಗೂ ಅಂಗಡಿ ಮುಂಭಾಗದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ಅಧ್ಯಕ್ಷರು ಸಭೆಯ ಗಮನಕ್ಕೆ ತಂದರು. ಅ ಸಂದರ್ಭದಲ್ಲಿ ಗರಂ ಆದ ಸದಸ್ಯರು ರಸ್ತೆ ಬದಿಯ ಎಲ್ಲಾ ಅನಧಿಕೃತ ಅಂಗಡಿಗಳನ್ನು , ಬೀದಿ ಬದಿ ವ್ಯಾಪಾರಿ ಗಳನ್ಜು ತೆರವು ಮಾಡಿ ಎಂದು ಒಕ್ಕೊರಲಿನಿಂದ ಹೇಳಿದರು.
ಪರಿಶಿಷ್ಟ ಜಾತಿ ಪಂಗಡದವರಿಗೆ ಪುರಸಭಾ ವ್ಯಾಪ್ತಿಯಲ್ಲಿ ಉಚಿತವಾಗಿ ನೀರು ನೀಡಬೇಕು ಎಂದು ಸದಸ್ಯ ಜನಾರ್ಧನ ಚೆಂಡ್ತಿಮಾರ್ ಅವರು ಸಭೆಯಲ್ಲಿ ಹೇಳಿದ್ದು, ಮುಂದಿನ ಸಭೆಗೆ ಚರ್ಚೆ ನಡೆಸಲು ತೀರ್ಮಾನಿಸಲಾಯಿತು.
ಪುರಸಭಾ ವ್ಯಾಪ್ತಿಯಲ್ಲಿರುವ ಬಿಲ್ಡಿಂಗ್ ಗಳಲ್ಲಿ ಎಸ್ಟಿಪಿ ಪ್ಲಾಂಟ್ ಎಷ್ಟು ಕಟ್ಟಡಗಳಿವೆ, ಪ್ಲಾಂಟ್ ಇರುವ ಕಟ್ಟಡಗಳು ಇವೆ, ಇಲ್ಲದೆ ಇರುವ ಕಟ್ಟಡ ಗಳಿಗೆ ನೀವು ಪರವಾನಗಿ ಯಾಕೆ ನೀಡಿದ್ದೀರಿ? ಪ್ಲಾಂಟ್ ಇಲ್ಲದವರ ಮೇಲೆ ಪುರಸಭೆ ಯಾಕೆ ಕಾನೂನು ಕ್ರಮ ಕೈಗೊಂಡಿಲ್ಲ, ಎಲ್ಲದರ ಮಾಹಿತಿ ಮುಂದಿನ ಸಭೆಯಲ್ಲಿ ನೀಡಬೇಕು, ಇಲ್ಲದಿದ್ದರೆ ಮುಂದಿನ ಸಭೆಯಲ್ಲಿ ಬಾವಿಗಿಳಿದು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಸದಸ್ಯ ಲುಕ್ಮಾನ್ ನೀಡಿದರು. ಪುರಸಭಾ ಸಾಮಾನ್ಯ ಸಭೆಯಲ್ಲಿ ಮಹಮ್ಮದ್ ನಂದಾವರ, ವಾಸುಪೂಜಾರಿ, ವಿದ್ಯಾವತಿಪ್ರಮೋದ್ ಕುಮಾರ್, ಹರಿಪ್ರಸಾದ್, ಸಿದ್ದೀಕ್ ಬೊಗೋಡಿ, ಮತ್ತಿತರ ರು ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ಸ್ವಾಮಿ, ಉಪಾಧ್ಯಕ್ಷೆ ಜೆಸಿಂತಾ ಡಿ.ಸೋಜ ಉಪಸ್ಥಿತರಿದ್ದರು.
ಅಗೌರವ- ಹೈಡ್ರಾಮಾ...!!!
ತನಗೆ ಮುಖ್ಯಾಧಿಕಾರಿ ಅಗೌರವ ನೀಡಿದ್ದಾರೆ, ಹೀಗಿದ್ದರೂ ಆಡಳಿತ ಪಕ್ಷ ಹಾಗೂ ಅಧ್ಯಕ್ಷರು ಈಕುರಿತು ಮಾತನಾಡಿಲ್ಲಎಂದು ಆರೋಪಿಸಿ ಹಿರಿಯ ಸದಸ್ಯ ಗೋವಿಂದಪ್ರಭು ನೇತೃತ್ವದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಸಭೆಗೆ ಹಾಜರಾಗದೆ ಹೊರಗೆ ನಿಂತಿದ್ದರು. ಈ ವೇಳೆ ಅಧ್ಯಕ್ಷರಾದಿಯಾಗಿ ಎಲ್ಲಾ ಕಾಂಗ್ರೇಸ್ ಸದಸ್ಯರು ಗೋವಿಂದಪ್ರಭು ಅವರ ಮನ ಒಲಿಸಲು ಯತ್ನಿಸಿದ್ದು, ಸದಸ್ಯ ಜನಾರ್ಧನ ಚೆಂಡ್ತಿಮಾರ್ ಯಶಸ್ವಿಯಾದರು. ಬಳಿಕ ಬಿಜೆಪಿ ಬೆಂಬಲಿತರು ಸಭೆಯ ಕೊನೆಯವರೆಗೂ ಭಾಗವಹಿಸಿದ್ದರು.