ಕುಂದಾಪುರ, ನ 10 (DaijiworldNews/SM): ಮುಖ್ಯಮಂತ್ರಿ ಭಾಗವಹಿಸಿದ ಸಮಾವೇಶದಲ್ಲಿ ಶಿಕ್ಷಕರು ಹಾಗೂ ಪೋಷಕರು ಭಾಗವಹಿಸುವಂತೆ ಆದೇಶಿಸಿದ್ದ ಬಿ.ಇ.ಒ. ಅವರನ್ನು ಅಮಾನತುಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ನವೆಂಬರ್ 7ರಂದು ಬೈಂದೂರು ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ನಡೆದ ಮುಖ್ಯಮಂತ್ರಿಗಳ ಸಮಾವೇಶಕ್ಕೆ ಬೈಂದೂರು ವಲಯದ ಎಲ್ಲಾ ಶಿಕ್ಷಕರು ಭಾಗವಹಿಸುವಂತೆ ಮತ್ತು ಶಾಲಾ ಪೋಷಕರನ್ನು ಕರೆತರುವಂತೆ ಆದೇಶಿಸಿದ ಬೈಂದೂರು ಬಿ.ಇ.ಓ. ಮಂಜುನಾಥ್ ತಿಳಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ರಾಜ್ಯಪಾಲರ ಆದೇಶದ ಅನುಸಾರ ಸರ್ಕಾರದ ಅಧೀನ ಕಾರ್ಯದರ್ಶಿಗಳು ನೀಡಿದ ಆದೇಶದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದು, ಅಮಾನತುಗೊಂಡ ಬಿ.ಇ.ಒ ಅವರನ್ನು ಮಂಗಳೂರಿನ ಡಯಟ್ ಸಂಸ್ಥೆಯಲ್ಲಿ ಲೀನ್ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.