ಕಾಸರಗೋಡು, ಫೆ 21(SM): ಪೆರಿಯದಲ್ಲಿ ಹತ್ಯೆಯಾದ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ಐದು ಮಂದಿ ಸಿಪಿಯಂ ಕಾರ್ಯಕರ್ತರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಇದರಿಂದ ಬಂಧಿತರಾದವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಸ್ಟಡಿಯಲ್ಲಿದ್ದ ಐದು ಮಂದಿಯನ್ನು ವಿಚಾರಣೆ ಬಳಿಕ ಇಂದು ಸಂಜೆ ಬಂಧಿಸಿದ್ದಾರೆ. ಎಚ್ಚಿಲಡ್ಕದ ಕೆ.ಎಂ. ಸುರೇಶ್(27), ಕೆ. ಅನಿಲ್ ಕುಮಾರ್(33), ಕುಂಡಂಗುಳಿಯ ಅಶ್ವಿನ್, ಕಲ್ಲಿ ಯಾಡ್ ನ ಶ್ರೀರಾಗ್ ಮತ್ತು ಗಿಜಿನ್ ಬಂಧಿತ ಆರೋಪಿಗಳು.
ಪ್ರಕಣಕ್ಕೆ ಸಂಬಂಧಪಟ್ಟಂತೆ ಸಿಪಿಎಂ ಸ್ಥಳೀಯ ಸಮಿತಿ ಸದಸ್ಯ ಎ. ಪೀತಾಂಬರನ್ ಮತ್ತು ಆರೋಪಿಗಳು ಸಂಚರಿಸಿದ್ದ ಕಾರು ಚಲಾಯಿಸಿದ್ದ ಸಜಿ ಜೋರ್ಜ್ ನನ್ನು ಈಗಾಗಲೇ ಬಂಧಿಸಲಾಗಿದ್ದು, ಪೀತಾಂಬರನ್ ನನ್ನು ಹೊಸದುರ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಿ ಫೆ. 27ರ ತನಕ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಸಜಿ ಜೊರ್ಜ್ ನನ್ನು ಗುರುವಾರದಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಇನ್ನು ಪ್ರಕರಣವನ್ನು ಕ್ರೈಂ ಬ್ರಾಂಚ್ ಗೆ ವಹಿಸಲಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹ್ರಾ ಪ್ರಕರಣದ ತನಿಖೇಯನ್ನು ಕ್ರೈಂ ಬ್ರಾಂಚ್ ತನಿಖೆಗೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.