ಬಂಟ್ವಾಳ, ನ. 09 (DaijiworldNews/SM) : ಸಾಲ ಕೇಳಿದಾಗ ಇಲ್ಲ ಅಂದದ್ದಕ್ಕೆ ಯುವಕನೋರ್ವನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಂದಾವರದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೋಲೀಸರ ತಂಡ ಬಂಧಿಸಿದೆ.
ಸಜೀಪ ಮುನ್ನೂರು ಗ್ರಾಮದ ನಂದಾವರ ಕುರುಬರ ಕೇರಿ ನಿವಾಸಿ ಮಹಮ್ಮದ್ ಅರ್ಪಾಸ್ ನ ಮೇಲೆ ಮೂವರು ಸೇರಿ ಚೂರಿ ಇರಿದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಘಟನೆಯಲ್ಲಿ ಗಾಯಗೊಂಡ ಅರ್ಪಾಸ್ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ತಾಳಿಪಡ್ಪು ನಿವಾಸಿಗಳಾದ ನವಾಜ್ ಹಾಗೂ ಆತನ ಸ್ನೇಹಿತರಾದ ಜಾಕೀರ್, ಸಫ್ವಾನ್ ಎಂಬುವರನ್ನು ಪೋಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ
ಅರ್ಪಾಸ್ ಅವರು ನಂದಾವರ ಕೋಟೆಯ ಮೈದಾನದಲ್ಲಿ ಗೆಳೆಯ ರ ಜೊತೆ ಆಟವಾಡಿ ಬಳಿಕ ಮೈದಾನದಲ್ಲಿ ವಿಶ್ರಾಂತಿಪಡೆಯುತ್ತಿದ್ದ ವೇಳೆ ಪರಿಚಯಸ್ಥ ನವಾಜ್ ಹಾಗೂ ಆತನ ಮೂವರು ಸ್ನೇಹಿತರು ಫಲ್ಸರ್ ಬೈಕಿನಲ್ಲಿ ಅ ಸ್ಥಳಕ್ಕೆ ಬಂದಿದ್ದು , ಅರ್ಪಾಸ್ ಬಳಿ 10 ಸಾವಿರ ಹಣ ಸಾಲ ಕೊಡುವಂತೆ ಕೇಳಿದ್ದಾನೆ. ಕೆಲಸವಿಲ್ಲದೆ ನನ್ನ ಬಳಿ ಹಣವಿಲ್ಲ ಎಂದು ಹೇಳಿದಾಗ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ , ನೀನು ಕೇಳಿದಾಗ ನಾನು ಸಾಲ ಕೊಡಬೇಕು , ನಾನು ಕೇಳಿದಾಗ ಇಲ್ಲ ಅಂತ ಹೇಳುತ್ತಿಯಾ ಎಂದು ಕಿಸೆಯಲ್ಲಿ ಇಟ್ಟುಕೊಂಡಿದ್ದ ಚೂರಿಯಿಂದ ಈತನ ಮೇಲೆ ಎದೆಗೆ ತಿವಿದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಬಂಟ್ವಾಳ ಡಿ.ವೈ.ಎಸ್.ಪಿ. ಪ್ರತಾಪ್ ಸಿಂಗ್ ಥೋರಾಟ್ ಅವರ ಮಾರ್ಗದರ್ಶನ ದಲ್ಲಿ ಎಸ್.ಐ.ಗಳಾದ ಅವಿನಾಶ್ ಹಾಗೂ ಕಲೈಮಾರ್ ನೇತೃತ್ವದ ಪೋಲೀಸರ ತಂಡ ಬಂಧಿಸಿದೆ.