ವರದಿ:ಮಾನಸ
ಉಡುಪಿ,ಫೆ 21(MSP): ತೊಟ್ಟಿಲು ತೂಗುವ ಕೈಗೆ ಜಗತ್ತನ್ನೇ ತೂಗುವ ಶಕ್ತಿ ಇದೆ ಎನ್ನುವುದಕ್ಕೆ ಸದ್ಯ ಕೃಷ್ಣ ನಗರಿ ಉಡುಪಿ ಜಿಲ್ಲೆಯೇ ನಿದರ್ಶನ. ಕಾರಣ ಜಿಲ್ಲೆಯಲ್ಲಿ ಪ್ರಸ್ತುತ ಬಹುತೇಕ ಮಹಿಳಾ ಅಧಿಕಾರಿಗಳೇ ಆಡಳಿತದ ಚುಕ್ಕಾಣಿ ಹಿಡಿದ್ದು ಜಿಲ್ಲಾಧಿಕಾರಿಯಿಂದ ಹಿಡಿದು ಪ್ರಮುಖ ಸ್ಥಾನದಲ್ಲಿ ಮಹಿಳೆಯರೇ ಎದ್ದು ಕಾಣುತ್ತಿದ್ದಾರೆ. ಹಾಗಾಗಿ ಉಡುಪಿ ಜಿಲ್ಲೆ ಮಹಿಳಾಮಣಿ ಅಧಿಕಾರಿಗಳ ಮೂಲಸ್ಥಾನವಾಗಿ ಪರಿವರ್ತನೆಯಾಗುತ್ತಿದೆ ಎಂದರೂ ತಪ್ಪಾಗಲಾರದು.
ಹೌದು, ಜಿಲ್ಲೆಯಲ್ಲಿ ಸಂಸದರಾಗಿ ಶೋಭಾ ಶೋಭಾ ಕರಂದ್ಲಾಜೆ, ಉಸ್ತುವಾರಿ ಸಚಿವೆಯಾಗಿ ಜಯಮಾಲಾ, ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪತಿ , ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯಗಿ ಸಿಂಧು ಬಿ ರೂಪೇಶ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿ ಅನಿತಾ ಭಾಸ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿಯಾಗಿ ಗ್ರೇಸಿ ಗೋನ್ಸಾಲ್ವಿಸ್ , ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆಯಾಗಿ ಶೀಲಾ ಕೆ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಯಾಗಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ತಾಲೂಕು ಆರೋಗ್ಯಾಧಿಕಾರಿ ನಾಗರತ್ನ ,ಜಿಲ್ಲಾ ಗ್ರಂಥಾಲಯ ಅಧಿಕಾರಿ ನಳಿನಿ ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ,ಹೀಗೆ ಪ್ರಸ್ತುತ ಪ್ರಮುಖ ಸ್ಥಾನಗಳಲ್ಲಿ ಮಹಿಳೆಯರೇ ಅಧಿಕಾರ ವಹಿಸಿಕೊಂಡಿದ್ದಾರೆ.
ಇದರೊಂದಿಗೆ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ವರ್ಗಾವಣೆ ಆದ ನಂತರ ಆ ಸ್ಥಾನಕ್ಕೆ ನೂತನ ಎಸ್ಪಿಯಾಗಿ ನಿಶಾ ಜೇಮ್ಸ್ ಅವರನ್ನು ನೇಮಕ ಮಾಡಲಾಗಿದೆ. ಒಟ್ಟಾರೆ ಜಿಲ್ಲಾಡಳಿತದ ಪ್ರಮುಖ ಆಯಕಟ್ಟಿನ ಸ್ಥಾನಗಳೆಲ್ಲಾ ಮಹಿಳಾ ಅಧಿಕಾರಿಗಳಿಂದಲೇ ಭರ್ತಿಯಾಗಿದೆ.
ಜಿಲ್ಲಾಡಳಿತದಲ್ಲಿ ಮಹಿಳಾ ಅಧಿಕಾರಿಗಳ ಬಗ್ಗೆ ’ದಾಯ್ಜಿವಲ್ಡ್ ’ ಜತೆ ಮಾತನಾಡಿರುವ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪತಿ "ನಾವೆಲ್ಲರೂ ಒಂದು ಟೀಂ ಆಗಿ ಕಾರ್ಯನಿರ್ವಹಿಸುತ್ತೇವೆ. ಮಹಿಳೆಯರು ಜವಾಬ್ದಾರಿಯನ್ನು ಸೂಕ್ಷ್ಮತೆಯಿಂದ ಪರಿಗಣಿಸುವ ಗುಣ ಹೊಂದಿದ್ದಾರೆ. ಸರ್ಕಾರ ನಮಗೆಲ್ಲಾ ಒಂದು ಉತ್ತಮ ಅವಕಾಶ ನೀಡಿದ್ದು ಯಶಸ್ವಿಯಾಗಿ ಅಧಿಕಾರ ನಡೆಸಲಿದ್ದೇವೆ ’ ಎಂದು ಪ್ರತಿಕ್ರಿಯಿಸಿದ್ದಾರೆ.