ಮಂಗಳೂರು, ನ 09 (DaijiworldNews/DB): ಮೂಲಗೇಣಿ ಕಾಯ್ದೆ ಜಾರಿಯಾಗಿ ದಶಕ ಕಳೆದರೂ ಮೂಲಗೇಣಿ ಒಕ್ಕಲುಗಳಿಗೆ ಇನ್ನೂ ನ್ಯಾಯ ಮರೀಚಿಕೆಯಾಗಿಯೇ ಉಳಿದಿದೆ ಎಂದು ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.
ಮೂಲಗೇಣಿ ಒಕ್ಕಲುಗಳಿಗೆ ಮಾಲಕತ್ವ ನೀಡುವ ಕಾಯ್ದೆ 2012ರಲ್ಲೇ ಜಾರಿಯಾಗಿದ್ದರೂ, ಒಕ್ಕಲುಗಳಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಕಾಯ್ದೆ ಜಾರಿಯಾಗುತ್ತಿದ್ದಂತೆಯೇ ಲಕ್ಷಾಂತರ ಮಂದಿ ಒಕ್ಕಲುಗಳು ತಮ್ಮ ಜಾಗದ ಕನಸು ಕಾಣುತ್ತಿದ್ದರಾದರೂ, ಅನುಭೋಗಿಸುತ್ತಿರುವ ನೆಲದ ಸಂಪೂರ್ಣ ಹಕ್ಕು ಅವರದ್ದಾಗಿಲ್ಲ. 2016ರಲ್ಲಿ ಈ ಕುರಿತ ನಿಯಮಗಳ ರಚನೆಯಾಗಿ ಇನ್ನೇನು ಎಲ್ಲವೂ ಸರಿಯಾಗುತ್ತದೆ ಎನ್ನುವಾಗ ಇದರ ವಿರುದ್ದ ಮೂಲಿದಾರರು ಹೈ ಕೋರ್ಟ್ ಮೆಟ್ಟಿಲೇರಿದ್ದು, ವಿಷಯ ಇತ್ಯರ್ಥವಾಗದೆ ಆರು ವರ್ಷ ಕಳೆದಿದೆ ಎಂದು ವೇದಿಕೆಯ ಪ್ರಮುಖರು ಹೇಳುತ್ತಾರೆ.
ಸಮಸ್ಯೆ ಹಿನ್ನೆಲೆ
ಮೂಲಗೇಣಿ ವ್ಯವಸ್ಥೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನೂರಾರು ವರ್ಷ ಹಿಂದಿನಿಂದಲೇ ಚಾಲ್ತಿಯಲ್ಲಿದೆ. ಇದರ ಸುತ್ತಲೇ ಸುತ್ತುತ್ತಿರುವ ಸಮಸ್ಯೆಗೆ ಶತಮಾನದ ಇತಿಹಾಸವಿದೆ. ಬ್ರಿಟಿಷ್ ಆಡಳಿತ ಕಾಲದಲ್ಲಿ ಭೂಕಂದಾಯ ವಸೂಲಿ ಮಾಡುವ ಅಧಿಕಾರವನ್ನು ಸ್ಥಳೀಯವಾಗಿ ಪ್ರಭಾವಶಾಲಿ ಶ್ರೀಮಂತರಿಗೆ, ದೇವಸ್ಥಾನ, ಮಸೀದಿ, ಚರ್ಚ್ಗಳಿಗೆ ನೀಡಲಾಯಿತು. ಹಾಗಾಗಿ ತೀರ್ವೆ ವಸೂಲಿ ಮಾಡಿ ಸರ್ಕಾರಕ್ಕೆ ಪಾವತಿ ಮಾಡುವ ನೋಡಿಕೊಳ್ಳುವವರು ಪಾರಂಪರಿಕವಾಗಿ ಆ ಭೂಮಿಗೆ ಸಂಬಂಧಿಸಿ ಮೂಲಿದಾರರು ಎನಿಸಿಕೊಂಡರು. ಇದೇ ಭೂಮಿಯನ್ನು ತಲಾಂತರಗಳಿಂದ ವಾಸ್ತವಿಕವಾಗಿ ಅನುಭವಿಸಿಕೊಂಡು ಬಂದವರು ಮೂಲಗೇಣಿದಾರರು ಎಂದು ಭೂಮಿಯ ಪ್ರಮಾಣಪತ್ರದಲ್ಲಿ ನಮೂದಿಸಲಾಯಿತು.
ಸ್ವಾಧೀನವಿರುವ ಭೂಮಿಯ ಮೇಲೆ ಸಂಪೂರ್ಣ ಒಡೆತನವಿಲ್ಲದ ಕಾರಣ ಜಾಗವನ್ನು ಅಭಿವೃದ್ದಿ ಪಡಿಸಲು ಕಷ್ಟಸಾಧ್ಯವಾಗಿದೆ. ಬ್ಯಾಂಕ್ನಿಂದ ಸಾಲ ಪಡೆಯಲೂ ಕಷ್ಟ ಅನುಭವಿಸುವಂತಾಗಿದೆ. ಮಾರುವ ಹಕ್ಕು ಪೂರ್ತಿಯಾಗಿ ಮೂಲಗೇಣಿದಾರನಿಗೆ ಇಲ್ಲ. ಇದರಿಂದಾಗಿ ಈ ಉಭಯ ಜಿಲ್ಲೆಯಲ್ಲಿರುವ ನೂರಾರು ಎಕರೆ ಭೂಮಿ ನಿರುಪಯುಕ್ತವಾಗುತ್ತಿದೆ. ಅಲ್ಲದೆ ಮೂಲಗೇಣಿದಾರರು ತ್ರಿಶಂಕು ಸ್ಥಿತಿಯಲ್ಲಿ ಬದುಕುವ ಅನಿವಾರ್ಯದಲ್ಲಿದ್ದಾರೆ ಎಂಬುದಾಗಿ ವೇದಿಕೆ ಪ್ರಮುಖರು ಹೇಳುತ್ತಾರೆ.
ಈ ನಡುವೆ ಮೂಲಗೇಣಿದಾರರ ಅನೇಕ ವರ್ಷಗಳ ಹೋರಾಟದ ಫಲವಾಗಿ ಮೂಲಗೇಣಿದಾರರಿಗೆ ಜಮೀನಿನ ಪೂರ್ಣ ಮಾಲಕತ್ವ ಹಾಗೂ ಮೂಲಿದಾರರಿಗೆ ನ್ಯಾಯಯುತ ಪರಿಹಾರ (ಗೇಣಿಗೆ 500 ಅಥವಾ 1000 ಪಟ್ಟು) ನೀಡುವ ಕಾಯ್ದೆ ಜಾರಿಗೆ ಬಂದಿತ್ತು.
ಸರ್ಕಾರ ಆಸಕ್ತಿ ವಹಿಸಲಿ
ಮೂಲಿದಾರರು ನ್ಯಾಯಾಲಯದಲ್ಲಿ ಪರಿಹಾರ ಪ್ರಮಾಣದ ಬಗ್ಗೆ ತಕರಾರು ಮಾಡಿ ವಿರುದ್ದ ದಾವೆ ಹೂಡಿದ್ದಾರೆ. ಆದರೆ ಅದಿನ್ನೂ ವಿಚಾರಣೆ ಹಂತದಲ್ಲಿಯೇ ಇದೆ. ಸರ್ಕಾರ ಹಾಗೂ ನ್ಯಾಯಾಲಯ ಮನಸು ಮಾಡಿದ್ದರೆ ಇದರ ವಿಚಾರಣೆಗೆ ವೇಗ ತರುವ ಕೆಲಸ ಮಾಡಬಹುದಿತ್ತು ಎನ್ನುತ್ತಾರೆ ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆಯ ಮಂಗಳೂರು ವಿಭಾಗದ ಅಧ್ಯಕ್ಷ ಮ್ಯಾಕ್ಸಿಂ ಡಿಸಿಲ್ವ ಮತ್ತು ಉಡುಪಿ ವಿಭಾಗದ ಅಧ್ಯಕ್ಷ ಎಸ್.ಎಸ್. ಶೇಟ್. ಪ್ರಸ್ತುತ ಮಂಗಳೂರಿನ ಡಾನ್ಬಾಸ್ಕೋ ಕಟ್ಟಡದ ಮೊದಲ ಮಹಡಿಯಲ್ಲಿ ವೇದಿಕೆಯ ಕಚೇರಿ ಕಾರ್ಯಾಚರಿಸುತ್ತಿದ್ದು, ಅಗತ್ಯವಿರುವವರು ಸಂಪರ್ಕಿಸಬಹುದು ಎಂದವರು ತಿಳಿಸಿದ್ದಾರೆ.
ಹೊಸ ಪೀಠದಲ್ಲಿ ವಿಚಾರಣೆ ಸಾಧ್ಯತೆ
ಈಗಾಗಲೇ ಒಬ್ಬರು ನ್ಯಾಯಾಧೀಶರಿಂದ ವಿಚಾರಣೆ ಪೂರ್ಣಗೊಂಡಿದೆ. ಆಗ ಮುಖ್ಯ ನ್ಯಾಯಾಧೀಶರು ಬದಲಾದರು. ಹೊಸ ಮುಖ ನ್ಯಾಯಾಧೀಶರು ಈ ದಾವೆಯ ಹೊಸ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಹಿನ್ನೆಲೆಯಲ್ಲಿ ದ್ವಿಸದಸ್ಯ ಪೀಠದಿಂದ ವಿಚಾರಣೆ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಆ ಬಳಿಕ ಮತ್ತೆ ಏಕಸದಸ್ಯ ಪೀಠ ಆಗಬಹುದು ಎಂಬ ಅಭಿಪ್ರಾಯ ಬಂದಿದೆ. ಇನ್ನು ವಿಚಾರಣೆ ಮುಂದುವರಿಯಬೇಕಿದೆ ಎಂದು ಮೂಲಗೇಣಿ ಹಿತರಕ್ಷಣ ವೇದಿಕೆ ವಕೀಲ ಎಂ.ಕೆ. ವಿಜಯಕುಮಾರ್ ತಿಳಿಸಿದ್ದಾರೆ.