ಕಾಸರಗೋಡು, ನ 09 (DaijiworldNews/DB): ಎಂಡೋಸಲ್ಫಾನ್ ಸಂತಸ್ತರಿಗೆ ಎಣ್ಮಕಜೆ, ಪುಲ್ಲೂರು ಗ್ರಾಮ ವ್ಯಾಪ್ತಿಯಲ್ಲಿ ಸಾಯಿ ಟ್ರಸ್ಟ್ ನಿರ್ಮಿಸಿರುವ 55 ಮನೆಗಳನ್ನು ನವಂಬರ್ 30ರೊಳಗೆ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಶಿಕ್ಷಣ ಸಚಿವೆ ಡಾ. ಆರ್. ಬಿಂದು ತಿಳಿಸಿದ್ದಾರೆ.
ತಿರುವನಂತಪುರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಂಡೋಸಲ್ಫಾನ್ ಸಂತಸ್ತ ವಲಯದಲ್ಲಿ ಪುನರ್ವಸತಿ ಕುರಿತ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿ ಮಟ್ಟದ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದರು.
ಪ್ರಸ್ತುತ ಕುಡಿಯುವ ನೀರು, ವಿದ್ಯುತ್ ತಲಪಿಸಲು ಹಾಗೂ ರಸ್ತೆ ಸೌಲಭ್ಯ ಕಲ್ಪಿಸಲು ಕಾರ್ಯ ಅಂತಿಮ ಹಂತದಲ್ಲಿದೆ. ಎಂಡೋಸಲ್ಫಾನ್ ಸಂತಸ್ತ ವಲಯದಲ್ಲಿ ಬಡ್ಸ್ ಶಾಲೆಗಳನ್ನು ತುರ್ತಾಗಿ ತೆರೆಯಲು ಕೇರಳ ಸಮಾಜ ಕಲ್ಯಾಣ ನಿಗಮ ಹಾಗೂ ಕುಟುಂಬಶ್ರೀಗೆ ಉಸ್ತುವಾರಿ ನೀಡಲು ತೀರ್ಮಾನಿಸಲಾಯಿತು.
ಈ ಶಾಲೆಗಳ ನೌಕರರ ಗುತ್ತಿಗೆ ನವೀಕರಣ ಸೇರಿದಂತೆ ಸಮಸ್ಯೆಗಳನ್ನು ಇತ್ಯರ್ಹಪಡಿಸಲು ಆದೇಶ ನೀಡಲಾಗಿದೆ. ಬಡ್ಸ್ ಶಾಲೆಗಳ ನೋಂದಣಿಗೆ 18 ವರ್ಷ ಕೆಳಗಿನ ಕನಿಷ್ಠ 20 ಮಕ್ಕಳು ಅಗತ್ಯ ಎಂಬ ನಿಬಂಧನೆ ಎಂಡೋ ಸಲ್ಪಾನ್ ವಲಯದ ಬಡ್ಸ್ ಶಾಲೆಗಳಿಗೆ ವಿನಾಯಿತಿ ನೀಡಲು ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.
ಎಂಡೋಸಲ್ಫಾನ್ ವಲಯದ ಪುನರ್ವಸತಿ ಗ್ರಾಮದ ಪ್ರಥಮ ಹಂತದ ಮನೆಗಳ ನಿರ್ಮಾಣ ಕಾರ್ಯ 2023ರ ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಕ್ಲಿನಿಕಲ್ ಸೈಕಾಲಜಿ, ಹೈಡ್ರೋ ಥೆರಪಿ, ಕನ್ಸಲ್ಟಿಂಗ್ ಬ್ಲಾಕ್ ಮೊದಲಾದ ಘಟಕ ಮೊದಲ ಹಂತದಲ್ಲಿ ಪೂರ್ಣಗೊಳಿಸಲಾಗುವುದು. ಎರಡನೇ ಹಂತದ ಯೋಜನೆ ಕುರಿತು ಶೀಘ್ರ ಅಧಿಕಾರಿಗಳ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.