ಮಂಗಳೂರು, ನ 09 (DaijiworldNews/DB): ಮಳಲಿ ಮಸೀದಿಯಲ್ಲಿ ದೇವಸ್ಥಾನ ಹೋಲುವ ಆಕೃತಿ ಪತ್ತೆ ವಿಚಾರಕ್ಕೆ ಸಂಬಂಧಿಸಿ ಮೂರನೇ ಹೆಚ್ಚುವರಿ ನ್ಯಾಯಾಧೀಶರು ಮತ್ತು ಜೆಎಂಎಫ್ ನ್ಯಾಯಾಲಯ ನೀಡಿರುವ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ವಿಶ್ವ ಹಿಂದು ಪರಿಷತ್ ತಿಳಿಸಿದೆ.
ವಿಶ್ವ ಹಿಂದು ಪರಿಷತ್ ಕಾರ್ಯಾಲಯ ವಿಶ್ವಶ್ರೀಯಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ವಿಹಿಂಪ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಶರಣ್ ಪಂಪ್ವೆಲ್, ಮಳಲಿ ಮಸೀದಿಯ ಆಡಳಿತ ಮಂಡಳಿಯು ಈ ಕಟ್ಟಡಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಎರಡು ಮಧ್ಯಂತರ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ. ಆ ಮೂಲಕ ಹಿಂದೂಗಳ ನಂಬಿಕೆಗೆ ಮೊದಲ ಜಯ ಸಿಕ್ಕಿದ್ದು, ಇಲ್ಲಿ ನಾವು ಭವ್ಯ ಮಂದಿರ ಕಟ್ಟುತ್ತೇವೆ ಎಂದರು.
ಯಾವುದೇ ಸಂಘರ್ಷಗಳುಂಟಾಗದಂತೆ ಮಸೀದಿಯ ಆಡಳಿತ ಮಂಡಳಿಯು ದೇವಳ ನಿರ್ಮಾಣಕ್ಕಾಗಿ ಈ ಜಾಗವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು. ಇಲ್ಲದಿದ್ದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದವರು ತಿಳಿಸಿದರು.
ಇಲ್ಲಿ ಶಿವಸಾನಿಧ್ಯವಿತ್ತು ಮತ್ತು ದೇವಳ ನಿರ್ಮಿಸದಿದ್ದಲ್ಲಿ ಊರಿಗೆ ಕಂಟಕ ಎಂಬ ಬಗ್ಗೆ ತಾಂಬೂಲ ಪ್ರಶ್ನೆಯಲ್ಲಿಯೂ ಕಂಡು ಬಂದಿದೆ. ಇನ್ನಷ್ಟು ಮಾಹಿತಿಗಾಗಿ ಅಷ್ಟಮಂಗಲ ಪ್ರಶ್ನೆ ನಡೆಸುತ್ತೇವೆ. ನ್ಯಾಯಾಲಯದಲ್ಲಿ ಅಂತಿಮ ತೀರ್ಪು ನಮ್ಮ ಪರವಾಗಿಯೇ ಬರಬಹುದೆಂಬ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಹಿಂಪ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ್ ಕುತ್ತಾರ್, ಬಜರಂಗದಳದ ವಿಭಾಗ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಉಪಸ್ಥಿತರಿದ್ದರು.