ಉಡುಪಿ,ನ 09 (DaijiworldNews/MS): ನೆಹರೂ ಕಾಲದಿಂದಲೂ ಅಲ್ಪಸಂಖ್ಯಾತರನ್ನು ಒಲೈಸುವುದು ಹಾಗೂ ಹಿಂದುಗಳನ್ನು ದಮನ ಮಾಡುವಂತದ್ದು ಕಾಂಗ್ರೆಸ್ಸಿಗರ ಸಂಸ್ಕೃತಿ. ಕಾಂಗ್ರೆಸ್ಸಿಗರ ಅಶ್ಲೀಲ ಮನಸ್ಸನ್ನು ಅವರ ಹೇಳಿಕೆಗಳ ಮೂಲಕ ನೋಡಬಹುದು ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಹಿಂದೂ ಎಂಬ ಪದದ ಅರ್ಥ ಪರ್ಷಿಯನ್ ಭಾಷೆಯಲ್ಲಿ ಅಶ್ಲೀಲ ಪದ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ಘಟಕದಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದೂ ಎಂಬುವುದು ಒಂದು ರೋಮಾಂಚನ ಪದ. ಆದರೆ ಕಾಂಗ್ರೆಸ್ಸಿಗರು ಮಾತ್ರ ಪ್ರತಿ ಬಾರಿ ಹಿಂದೂ ವಿರೋಧಿ ಹೇಳಿಕೆ ನೀಡಿ, ಹಿಂದೂ ಧರ್ಮದ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದಾರೆ. ರಾಮ ಸೇತುವನ್ನು ಒಡೆಯುವ ನಿರ್ಧಾರ ಹಾಗೂ ರಾಮ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದು ಈ ಕಾಂಗ್ರೆಸ್ಸಿಗರ ಹೇಳಿದ್ದರು.
ಸತೀಶ್ ಜಾರಕಿಹೊಳಿ ಹೇಳಿಕೆಯ ವಿರುದ್ದ ಕಾಂಗ್ರೆಸ್ ಈವರೆಗೆ ತನ್ನ ನಿಲುವನ್ನು ತಿಳಿಸಿಲ್ಲ, ಜಾರಕಿಹೊಳಿ ದೇಶದ ಜನತೆ ಮುಂದೆ ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನದಿಂದ ಸತೀಶ್ ಜಾರಕಿ ಹೊಳಿಯನ್ನು ಕಾಂಗ್ರೆಸ್ ವಜಾ ಮಾಡಬೇಕು ಇಲ್ಲವಾದರೆ ದೊಡ್ಡ ಮಟ್ಟದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಅಶ್ಲೀಲ ಹಿಂದು ಎಂಬ ಹೇಳಿಕೆ ಕಾಂಗ್ರೆಸಿಗರ ಮನಸ್ಥಿತಿ ಹೇಗೆ ಎನ್ನುವುದರ ಬಗ್ಗೆ ಜನತೆಗೆ ತಿಳಿಸುತ್ತಿದೆ. ಇದನ್ನು ಭಾರತೀಯ ಜನತಾ ಪಾರ್ಟಿ ಹಾಗೂ ಪ್ರತಿಯೊಬ್ಬ ಹಿಂದೂ ಖಂಡಿಸುತ್ತಾರೆ.
ನೆಹರೂರಿಂದ ಹಿಡಿದು ಸತೀಶ್ ಜಾರಕಿಹೊಳಿ ತನಕ ಎಲ್ಲಾ ಕಾಂಗ್ರೆಸಿಗರ ಹೇಳಿಕೆ ಒಂದೇ ರೀತಿಯದ್ದಾಗಿದೆ. ಕಾಂಗ್ರೆಸಿಗರು ಹಿಂದಿನಿಂದಲೂ ಹಿಂದೂ ವಿರೋಧಿಗಳು, ಹಿಂದೂ ಗಳ ಬಗ್ಗೆ ಅವಹೇಳನ ಹಾಗೂ ಹಿಂದೂ ಭಾವನೆಗಳ ಜೊತೆ ಆಟವಾಡುವುದು ಕಾಂಗ್ರೆಸಿಗರ ಕೀಳು ಮನಸ್ಥಿತಿಯ ಸಂಕೇತ. ಕಾಂಗ್ರೆಸ್ ಈ ಹಿಂದೆಯೂ ರಾಮ ಮಂದಿರ, ರಾಮಸೇತು, ಕಾಶ್ಮೀರದ ವಿಷಯದಲ್ಲಿಯೂ ಕೂಡ ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡಿ ವಿವಾದಾತ್ಮಕ ಹೇಳಿಕೆಯನ್ನು ನೀಡಿ, ತನ್ನ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ನೋಡಿತ್ತು. ಅಶ್ಲೀಲ ಹಿಂದೂ ಎನ್ನುವ ಪದ ಕೇವಲ ಕಾಂಗ್ರೆಸ್ನ ಕಾರ್ಯಕರ್ತರಿಗೆ ಮಾತ್ರ ಅನ್ವಯವಾಗುತ್ತದೆ ಹೊರತು ದೇಶದ ಯಾವೊಬ್ಬ ಹಿಂದುವು ಅಶ್ಲೀಲನಲ್ಲ ಎಂದರು.
ಪ್ರತಿಭಟನೆಯಲ್ಲಿ ಮೈಸೂರು ಎಲೆಕ್ಟ್ರೀಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ, ಜಿಲ್ಲ ಎಸ್.ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ನಗರ ಭಾಜಪದ ಅಧ್ಯಕ್ಷ ಮಹೇಶ್ ಠಾಕೂರ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.