ಮಂಗಳೂರು,ಫೆ 21(MSP): ಸರ್ಕಾರಿ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳನ್ನು ಲಕ್ಷ್ಮಿ ಪೂಜೆ ನೆಪದಲ್ಲಿ ಬನವಾಸಿಗೆ ಕರೆದೊಯ್ದು ಆಕೆಗೆ ನಿಗದಿಪಡಿಸಿದ ಹಣ ನೀಡದೆ ವಂಚಿಸಿದ ಪ್ರಕರಣದ ಆರೋಪಿಗಳಾದ ಕೃಷ್ಣಾಪುರ ನಿವಾಸಿ ಹೈದರಾಲಿ(44) , ವಾಮಂಜೂರಿನ ಅಲೆಕ್ಸ್(44) ಪಾಂಡೇಶ್ವರದ ಬಸ್ ನಿರ್ವಾಹಕ ಪ್ರವೀಣ್ (40) ಎಂಬವರನ್ನು ಸುರತ್ಕಲ್ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳ ಮೇಲೆ ವಂಚನೆ , ಒಳಸಂಚು ಸೆಕ್ಷನ್ ನಡಿ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ಬೆಂಗಳೂರಿನ ಅನಂತೇಶ ಸ್ವಾಮಿ ತಲೆಮರೆಸಿಕೊಂಡಿದ್ದಾನೆ. ಸುರತ್ಕಲ್ ಬಳಿ ಮಧ್ಯ ನಿವಾಸಿಯಾದ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಬಳಿ ಕ್ಯಾಂಟೀನ್ ಇರಿಸಿದ್ದ ಜ್ಯೋತಿ ಎಂಬಾಕೆ ಮೂಲಕಸ್ವಾಮೀಜಿಯೊಬ್ಬರ ಸಂಪರ್ಕಕ್ಕೆ ಬಂದಿದ್ದಳು.
ವಿದ್ಯಾರ್ಥಿನಿ ಬಡ ಕುಟುಂಬದವಳಾಗಿದ್ದು ಪೂಜೆಯಲ್ಲಿ ಭಾಗವಹಿಸಿದರೆ 20 ಲಕ್ಷ ರೂ. ನೀಡುವ ಭರವಸೆ ನೀಡಲಾಗಿತ್ತು. ಮೊದಲಿಗೆ ಉಡುಪಿಯಲ್ಲಿ ಪೂಜೆ ನಡೆಯಲಿದೆ ಎಂದು ತಿಳಿಸಿ, ಬಳಿಕ ಬನವಾಸಿಗೆ ಕರೆದೊಯ್ಯಲಾಗಿತ್ತು. ಪೂಜೆ ಸಂದರ್ಭ ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದು, ಪೂಜೆಗೆ ಸಹಕರಿಸಲು ನಿರಾಕರಿಸಿದ್ದಳು. ಬಳಿಕ ಆರೋಪಿಗಳು ಆಕೆಗೆ ಹಣ ನೀಡದೆ ಸುರತ್ಕಲ್ ಹೆದ್ದಾರಿ ಬಳಿಯ ಹೋಟೇಲ್ ವೊಂದರ ಹೆದ್ದಾರಿ ಬದಿ ಜ.28 ರಂದು ಬಿಟ್ಟುಹೋಗಿದ್ದರು ಎನ್ನಲಾಗಿದೆ. ಈ ಬಗ್ಗೆ ಫೆ.8 ರಂದು ಪೊಲೀಸರಿಗೆ ದೂರು ನೀಡಲಾಗಿತ್ತು.
ಪೊಲೀಸರು ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಲಾಗಿದೆ.