ಮಂಗಳೂರು, ನ 09 (DaijiworldNews/MS):ನಗರದ ಹೊರವಲಯದ ಮಳಲಿ ಮಸೀದಿ ಕಟ್ಟಡದಲ್ಲಿ ದೇವಾಲಯ ಹೋಲುವ ರಚನೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಇಂದು ಪ್ರಕಟಿಸುವ ನಿರೀಕ್ಷೆ ಇದೆ.
ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾವನ್ನು ನವೀಕರಣಕ್ಕಾಗಿ ಕೆಡವಿದಾಗ ಹಿಂದೂ ದೇಗುಲ ಹೋಲುವ ಆಕೃತಿಯ ವಾಸ್ತುಶಿಲ್ಪದ ಕಟ್ಟಡ ಪತ್ತೆಯಾಗಿತ್ತು. ಈ ಹಿನ್ನಲೆ ಮಸೀದಿ ಸಮುಚ್ಚಯದ ಸರ್ವೇಕ್ಷಣೆಗೆ ಆದೇಶ ಮಾಡಬೇಕು ಎಂದು ಹಿಂದುತ್ವ ಪರ ಸಂಘಟನೆಗಳು ಮನವಿ ಮಾಡಿದ್ದವು.
ಇದನ್ನು ವಿರೋಧಿಸಿದ್ದ ಮಸೀದಿ ಆಡಳಿತ ಮಂಡಳಿ ಮತ್ತು ಮುಸ್ಲಿಂ ಸಂಘಟನೆಗಳು ಈ ದಾವೆಯ ವಿಚಾರಣೆ ನಡೆಸುವ ಅಧಿಕಾರವು ನ್ಯಾಯಾಯಕ್ಕೆ ಇಲ್ಲ. ಒಂದು ಜಾಗವನ್ನು ಪುರಾತನ ಸ್ಮಾರಕ ಎಂದು ಹೇಳಲು ಕೇಂದ್ರ ಸರ್ಕಾರದ ಅಧಿಸೂಚನೆ ಇರಬೇಕು. ಆದರೆ ಮಳಲಿ ಮಸೀದಿಯ ಮೇಲೆ ಯಾವುದೇ ಗೆಜೆಟ್ ನೋಟಿಫಿಕೇಶನ್ ಇರಲಿಲ್ಲ. ಹೀಗಿರುವಾಗ ಇದನ್ನು ಪುರಾತನ ಸ್ಮಾರಕವೆಂದು ಹೇಳಲು ಸಾಧ್ಯವಿಲ್ಲ ಅಲ್ಲದೇ ಇದನ್ನ ಸ್ಮಾರಕವೋ ಅಲ್ಲವೋ ಎಂದು ಹೇಳಲು ಸಿವಿಲ್ ಕೋರ್ಟ್ಗೆ ಅಧಿಕಾರ ಇಲ್ಲ ಎಂದು ವಾದ ಮಂಡಿಸಿತ್ತು.