ಬೆಳ್ತಂಗಡಿ, ನ 08 (DaijiworldNews/SM): ಬಿ.ಎಮ್.ಎಸ್ ಕಾರ್ಮಿಕ ಸಂಘದ ವತಿಯಿಂದ ಮಂಗಳೂರಿನಲ್ಲಿ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ಬಸ್ ನಿಲ್ದಾಣದ ಪಕ್ಕದ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬ್ಯಾನರ್ ಕಟ್ಟುತ್ತಿದ್ದ ಇಬ್ಬರಿಗೆ ವಿದ್ಯುತ್ ತಂತಿ ಸ್ವರ್ಶಿಸಿ ಗಂಭೀರ ಗಾಯಗೊಂಡಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದರಲ್ಲಿ ಓರ್ವ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಬೆಳ್ತಂಗಡಿ ಕೋರ್ಟ್ ನಿವಾಸಿ ವ್ಯಾಸರಾಯ ಅಚಾರ್ಯ ಅವರ ಪುತ್ರ ಗೂಡ್ಸ್ ವಾಹನ ಚಾಲಕ ಪ್ರಶಾಂತ್ ಅಚಾರ್ಯ(32) ಮೃತಪಟ್ಟ ವ್ಯಕ್ತಿ. ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಮಲೆಬೆಟ್ಟು ನಿವಾಸಿ ಸಂಜೀವ ಅಚಾರ್ಯ ಅವರ ಮಗನಾದ ಸತೀಶ್(25) ಗಂಭೀರ ಗಾಯಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಖಾಸಗಿ ಪ್ರಿಂಟರ್ಸ್ ಗೆ ಕಾರ್ಯಕ್ರಮದ ಬ್ಯಾನರ್ ಹಾಕಲು ಸಂಘದವರು ಕಾಂಟ್ರಕ್ಟ್ ನೀಡಿದ್ದು ಅದರಂತೆ ಗೂಡ್ಸ್ ಆಟೋದಲ್ಲಿ ಬ್ಯಾನರ್ ತಂದು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಸಂಜೆ ಅಳವಡಿಸುತ್ತಿದ್ದರು. ಸಂಜೆ 7 ಗಂಟೆ ಸುಮಾರಿಗೆ ಬ್ಯಾನರ್ ನ ಕಬ್ಬಿಣ ರಾಡ್ ವಿದ್ಯುತ್ ಲೈನ್ ನ ತಂತಿಗೆ ತಾಗಿದ್ದು ಈ ವೇಳೆ ಕೆಲಸದ ಇಬ್ಬರು ಯುವಕರಿಗೆ ವಿದ್ಯುತ್ ಶಾಕ್ ಹೊಡೆದು ನೆಲಕ್ಕೆ ಎಸೆಯಲ್ಪಟ್ಟಿದ್ದಾರೆ. ಸ್ಥಳೀಯರ ಸಹಕಾರದಲ್ಲಿ ಇಬ್ಬರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೆ ಓರ್ವ ಸಾವನ್ನಪ್ಪಿದ್ದು ಇನ್ನೊಬ್ಬ ಗಂಭೀರ ಸ್ಥಿತಿಯಲ್ಲಿದ್ದಾನೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.