ಕಡಬ,ಫೆ 21(MSP): ಚಾಲಕನ ನಿಯಂತ್ರಣ ತಪ್ಪಿದ ಮಹೀಂದ್ರಾ ಎಕ್ಸ್ ಯುವಿ ಕಾರೊಂದು ಹೆದ್ದಾರಿ ಬದಿಯ ಬೃಹತ್ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಅಳೇರಿ ಎಂಬಲ್ಲಿ ಫೆ.21ರ ಗುರುವಾರ ಸಂಭವಿಸಿದೆ.
ಬೆಂಗಳೂರು ಮೂಲದ ಯಾತ್ರಿಕರಿದ್ದ ಕಾರು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದಾಗ ಅಳೇರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದು, ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ರಸ್ತೆಗೆ ಬಿದ್ದುದರಿಂದ ಕೆಲಕಾಲ ರಸ್ತೆ ತಡೆ ಉಂಟಾಗಿದ್ದು, ಬಳಿಕ ಕಡಬ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.