ಕಾರ್ಕಳ,ನ 08(DaijiworldNews/MS): ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸವಲತ್ತು ಸಿಗುವಂತಾಗಬೇಕು. ಸಮಾಜದಲ್ಲಿ ಬಡವನೋರ್ವ ಸರಕಾರಿ ಸೌಲಭ್ಯದಿಂದ ವಂಚಿತನಾಗಬಾರದು. ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಿಕೊಡುವ ಉದ್ದೇಶ ರಾಜ್ಯ ಸರಕಾರಕ್ಕಿದೆ. ಇದೇ ಉದ್ದೇಶದಿಂದ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವ ಮೂಲಕ ಬಡಜನತೆಗೆ ಜಾಗದ ಹಕ್ಕುಪತ್ರ ವಿತರಿಸುವಲ್ಲಿ ಸರಕಾರ ದಿಟ್ಟ ಹೆಜ್ಜೆ ಮುಂದಿಟ್ಟಿದೆ. ಸರಕಾರಿ ಜಾಗದಲ್ಲಿ ಕುಳಿತು ಹಕ್ಕುಪತ್ರ ಪಡೆಯಲಾಗದ ಫಲಾನುಭವಿಗಳಿಗೆ ಹಂತಹಂತವಾಗಿ ಹಕ್ಕುಪತ್ರ ವಿತರಿಸುವ ಅಭಿಯಾನಕ್ಕೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಚಾಲನೆ ನೀಡಲಾಗಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಕಾರ್ಕಳ ತಾಲೂಕು ಪಂಚಾಯತ್ತಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಫಲಾನುಭವಿಯ ಕೈಗೆ ಹಕ್ಕು ಪತ್ರ ಸಿಕ್ಕಿದ ಬಳಿಕವಷ್ಟೇ ಆ ಜಾಗದ ಮಾಲಿಕ ಅವರಾಗುತ್ತಾರೆ. ಅಂತಹ ಸುವರ್ಣವಕಾಶ ಒದಗಿ ಬಂದಿದೆ ಈ ದಿನ. ಆರಂಭಿಕ ಹಂತದಲ್ಲಿ ನೂರು ಜನರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ಹಂತಹಂತವಾಗಿ ನಡೆಯಲಿದೆ. ನಮಗೆ ಹಕ್ಕುಪತ್ರ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಯಾರೂ ನಿರಾಶರಾಗುವ ಅಗತ್ಯವಿಲ್ಲ. ಹಕ್ಕುಪತ್ರ ವಿತರಣೆ ವಿಳಂಬವಾದಲ್ಲಿ ನಮ್ಮ ಕಚೇರಿಗೆ ಬಂದು ಮಾಹಿತಿ ನೀಡಿ ಎಂದರು. ನೆರೆಮನೆಯವರು ಅಂತಹ ಸಮಸ್ಸೆಯನ್ನು ಎದುರಿಸುತ್ತಿದ್ದರೆ ಅವರಿಗೂ ಧೈರ್ಯ ತುಂಬಿ. ಸರಕಾರವು ಪ್ರತಿಯೊಬ್ಬನ ಆಶೋತ್ತರವನ್ನು ಈಡೇರಿಸುತ್ತದೆ. ಈ ಮೂಲಕ ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಸರಕಾರದ ಎಲ್ಲಾ ಸವಲತ್ತುಗಳು ದೊರಕಲಿದೆ. ಮನೆ ನಿರ್ಮಿಸಲು ೧.೫೦ ಲಕ್ಷ ರೂ. ಅನುದಾನವೂ ಸಿಗಲಿದೆ. ಎಲ್ಲರೂ ಹಕ್ಕುಪತ್ರ ಪಡೆದು ಹೊಸ ಮನೆ ನಿರ್ಮಿಸಿ ನನ್ನನ್ನೂ ಕೂಡಾ ಆಹ್ವಾನಿಸಿ ಎಂದು ಫಲಾನುಭವಿಗಳಿಗೆ ವಿವರಿಸಿದರು.
ಮುಂದಿನ ದಿನಗಳಲ್ಲಿ ಆಯಾಯ ಗ್ರಾ.ಪಂ.ವ್ಯಾಪ್ತಿಗೆ ತೆರಳಿ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮವನ್ನು ಕೂಡಾ ಕಂದಾಯ ಇಲಾಖೆಯ ಜೊತೆ ಮಾಡಲಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ 14 ಗ್ರಾ.ಪಂ.ವ್ಯಾಪ್ತಿಯ 400 ಫಲಾನುಭವಿಗಳಿಗೆ 94 ಸಿ ಮತ್ತು 94 ಸಿ.ಸಿ. ಯಡಿಯಲ್ಲಿ ಹಕ್ಕುಪತ್ರ ವಿತರಣೆ ಹಾಗೂ ಕೋವಿಡ್ 49 ಸಹಾಯಧನದ ಚೆಕ್ ವಿತರಣೆ ನಡೆಯಿತು.
ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ.ಎನ್., ಹಿರ್ಗಾನ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಶೆಟ್ಟಿ, ಮಿಯ್ಯಾರು ಗ್ರಾ.ಪಂ.ಅಧ್ಯಕ್ಷ ಗಿರೀಶ್ ಅಮೀನ್, ಕುಕ್ಕುಂದೂರು ಗ್ರಾ.ಪಂ.ಅಧ್ಯಕ್ಷೆ ಶಶಿಮಣಿ, ವಿವಿಧ ಗ್ರಾ.ಪಂ.ನ ಅಧ್ಯಕ್ಷರು, ಸದಸ್ಯರು, ಇಲಾಖಾಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.