ಮಂಗಳೂರು, ನ 08 (DaijiworldNews/DB): ಇಂದು ನಾವು ಏನಾಗಿದ್ದೇವೋ ಅದಕ್ಕೆ ಮೂಲ ಕಾರಣ ನಮಗೆ ಕಲಿಸಿ, ನಮ್ಮನ್ನು ತಿದ್ದಿ ತೀಡಿ ಬೆಳೆಸಿದ ವಿದ್ಯಾಸಂಸ್ಥೆ. ಉದ್ಯೋಗ ಅಥವಾ ಸಾಧನೆಗಾಗಿ ಎಷ್ಟೇ ದೂರ ಹೋದರೂ ನಾವು ಕಲಿತ ಸಂಸ್ಥೆಯ ನೆನಪು ಮಾಸಬಾರದು. ವಿದ್ಯೆ ಕಲಿಸಿದ ಗುರುಗಳ ಆಶೀರ್ವಾದ ಜೀವನಕ್ಕೆ ಶ್ರೀರಕ್ಷೆ ಎಂದು ದಾಯ್ಜಿವರ್ಲ್ಡ್ ಮೀಡಿಯಾ ನಿರ್ದೇಶಕ ಹಾಗೂ ಕಲಾವಿದ ವಾಲ್ಟರ್ ನಂದಳಿಕೆ ಹೇಳಿದ್ದಾರೆ.
ನಂತೂರು ನಿಟ್ಟೆ ಡಾ. ಶಂಕರ ಅಡ್ಯಂತಾಯ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸ್ನೇಹಕೂಟ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ಹಲವು ವರ್ಷಗಳ ಹಿಂದೆ ಡಾ. ವಿನಯ್ ಹೆಗ್ಡೆ ನಿಟ್ಟೆಯಲ್ಲಿ ಸ್ಥಾಪಿಸಿದ ಒಂದು ಚಿಕ್ಕ ವಿದ್ಯಾಸಂಸ್ಥೆ ಇಂದು ಅವರ ದೂರದೃಷ್ಟಿಯಿಂದ ರಾಜ್ಯಾದ್ಯಂತ ವಿಸ್ತರಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಇಂತಹ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳು ಭಾಗ್ಯವಂತರು. ಹಳೆ ವಿದ್ಯಾರ್ಥಿ ಸಂಘದಿಂದ ಸಂಸ್ಥೆಯ ಪ್ರಗತಿಗೆ ಪೂರಕವಾದ ಚಟುವಟಿಕೆಗಳು ನಡೆಯಲಿ ಎಂದು ಅವರು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಕಲಾವಿದೆ ರೂಪಾ ವರ್ಕಾಡಿ ಮಾತನಾಡಿ, ತಾನು ಓರ್ವ ಕಲಾವಿದೆ ಆಗಿರುವುದರಿಂದ ಜನ ಗುರುತಿಸುತ್ತಾರೆ. ಈ ಕ್ಷೇತ್ರದಲ್ಲೂ ಪ್ರಾಮಾಣಿಕತೆ ಇದ್ದರೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಆದರೆ ನಾವೆಲ್ಲರೂ ಕಲಿತ ವಿದ್ಯಾಸಂಸ್ಥೆಗೆ ಮಾತ್ರ ಸದಾ ಋಣಿಗಳಾಗಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಡಾ. ನವೀನ್ ಶೆಟ್ಟಿ ಕೆ. ಮಾತನಾಡಿ, ಒಂದು ಸಂಸ್ಥೆಯ ಪ್ರಗತಿಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯ. ತಮ್ಮ ಭವಿಷ್ಯ ರೂಪಿಸಿದ ವಿದ್ಯಾಸಂಸ್ಥೆಯನ್ನು ಮರೆಯದೆ ಬಂದು ಇಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ಸಂಸ್ಥೆ ಮತ್ತು ಹಳೆಯ ವಿದ್ಯಾರ್ಥಿಗಳ ನಡುವೆ ಬಾಂಧವ್ಯ ವೃದ್ಧಿಸುತ್ತದೆ. ಈ ವಿದ್ಯಾರ್ಥಿ ಸಂಘದಿಂದ ಸಂಸ್ಥೆಯ ಬೆಳವಣಿಗೆಗೆ ಪೂರಕವಾದ ಸಮಾಜಮುಖಿ ಚಟುವಟಿಕೆಗಳು ನಿರಂತರ ನಡೆಯುತ್ತಿರಲಿ ಎಂದು ಆಶಿಸಿದರು.
ನಟ, ರೂಪದರ್ಶಿ, ಮಿ. ಕರ್ನಾಟಕ, ಮಿ. ದಕ್ಷಿಣಕನ್ನಡ, ಪ್ರಶಸ್ತಿ ವಿಜೇತ ರಾಷ್ಟ್ರ ಹಾಗೂ ರಾಜ್ಯ ಮಟ್ಟಗಳಲ್ಲಿ ವಾಲಿಬಾಲ್, ತ್ರೋಬಾಲ್ ಮತ್ತು ಆಟೋಟಗಳಲ್ಲಿ ಮಿಂಚಿದ ಅನ್ವಿತ್ ಶೆಟ್ಟಿ, ತಾನು ಸಂಯೋಜಿಸಿದ ಹಾಡಿನಿಂದ ವಿಶ್ವ ಮಟ್ಟದಲ್ಲಿ ತನ್ನ ಹೆಸರು ದಾಖಲಿಸಿದ ಕಲಾವಿದ ಪ್ರಾಣೇಶ್, ರಾಷ್ಟ್ರ ಮಟ್ಟದಲ್ಲಿ ಕರಾಟೆ ಹಾಗೂ ರಿಲೇಯಲ್ಲಿ ಪ್ರಥಮ ಸ್ಥಾನ ಗಳಿಸಿದ ವೀಕ್ಷಿತಾ, ಕಿರುಚಿತ್ರ ಹಾಗೂ ನಾಟಕ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟು ಪ್ರಶಸ್ತಿಗೆ ಭಾಜನರಾದ ದೃಶಿತ್ ಹಾಗೂ ಕಾರ್ತಿಕ್, ರಾಷ್ಟ್ರ ಮಟ್ಟದಲ್ಲಿ ವಾಲಿಬಾಲ್ ರಜತ ಪದಕ ವಿಜೇತರಾದ ದೇವಿಪ್ರಸಾದ್, ಕನ್ನಡ ಹಾಗೂ ಮಲೆಯಾಳಂನಿಂದ ತುಳುವಿಗೆ ಭಾಷಾಂತರಿಸುವ ಸೇವಾಸಿರಿ ಹ್ಯಾಪನ್ನು ಅಭಿವೃದ್ಧಿ ಪಡಿಸಿದ ಜ್ಞಾನೇಶ್, ನಿಕಟ ಪೂರ್ವ ಅಧ್ಯಕ್ಷ ಕಿರಣ್ ಕುಮಾರ್ ಅವರನ್ನು ಸಂಸ್ಥೆಯ ಹಳೆ ವಿದ್ಯಾರ್ಥಿಗಳ ವಿಶೇಷ ಸಾಧನೆಯ ನೆಲೆಯಲ್ಲಿ ಗುರುತಿಸಿ ಗೌರವಿಸಲಾಯಿತು.
ಹಳೆ ವಿದ್ಯಾರ್ಥಿ ಸಂಘದ 2022-23ನೇ ವರ್ಷಕ್ಕೆ ನೂತನ ಅಧ್ಯಕ್ಷರಾಗಿ ಉದ್ಯಮಿ ವಿಜೇಶ್ ನಾಯ್ಕ್, ಕಾರ್ಯದರ್ಶಿಯಾಗಿ ವಿನೋದ್ ಕುಮಾರ್, ಕ್ರೀಡಾ ಕಾರ್ಯದರ್ಶಿ ಹಿತೇಶ್, ಜೊತೆ ಕಾರ್ಯದರ್ಶಿ ಅಶ್ವಿತ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಕಾರ್ತಿಕ್ ನಾಯರ್ ಅಧಿಕಾರ ಸ್ವೀಕರಿಸಿದರು.
ನಿಟ್ಟೆ ಪರಿಗಣಿತ ವಿಶ್ವ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಪರ್ಕ ಹಾಗೂ ಕ್ಷೇಮಾಪಾಲನ ನಿರ್ದೇಶಕ ಪ್ರಸನ್ನ ಕೈಲಾಜೆ, ಸಂಸ್ಥೆಯ ಉಪಪ್ರಾಂಶುಪಾಲೆ ಅನ್ನಪೂರ್ಣ ನಾಯ್ಕ್, ಸಂಗೀತಾ, ವಿದ್ಯಾರಾಣಿ, ಗೀತಾ ವೀಣಾ ಮತ್ತಿತರರು ಉಪಸ್ಥಿತರಿದ್ದರು.
ಶಮಿತಾ ಪ್ರಾರ್ಥಿಸಿದರು. ವಿಜೇಶ್ ನಾಯ್ಕ್ ಸ್ವಾಗತಿಸಿದರು. ಉಪನ್ಯಾಸಕಿ ವೀಣಾ ಉಳ್ಳಾಲ್ ಪ್ರಸ್ತಾವನೆಗೈದರು. ಕಿರಣ್ ಅತಿಥಿಗಳನ್ನು ಪರಿಚಯಿಸಿದರು. ವಿನೋದ್ ಕುಮಾರ್ ವಂದಿಸಿದರು. ರಜತ್ ಶೆಟ್ಟಿ ನಿರೂಪಿಸಿದರು.