ಉಡುಪಿ, ನ 08(DaijiworldNews/MS):ಹಿಂದೂ ಪದ ಅಶ್ಲೀಲ ಅರ್ಥ ಹೊಂದಿದೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ವಿರುದ್ದ ಬಿಜೆಪಿ ತೀವ್ರವಾಗಿ ಖಂಡಿಸಿದೆ. " ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು. ಹಿಂದುಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದು ನಿಜಕ್ಕೂ ಖಂಡನೀಯ " ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಕಾಂಗ್ರೆಸ್ ನವರು ಖಂಡಿಸಿದ್ದಾರೆ. ಆದರೆ ಕೇವಲ ಖಂಡನೆ ಮಾಡಿದರೆ ಸಾಕಾಗೋದಿಲ್ಲ ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು. ಹಗುರವಾಗಿ ಮಾತನಾಡಿದರೆ ದೊಡ್ಡವನಾಗುತ್ತೇನೆ ಎಂದು ಅಂದುಕೊಂಡಿದ್ದರೆ ಅದೊಂದು ಭ್ರಮೆ. ಸತೀಶ್ ಜಾರಕಿಹೊಳಿ ಗೌರವದಿಂದ ನಡೆದುಕೊಳ್ಳಬೇಕು.ಹಿಂದುಗಳಿಗೆ ಅಪಮಾನ ಆಗುವ ಹಾಗೆ ವರ್ತನೆ ಮಾಡಬಾರದು ಎಂದು ಹೇಳಿದ್ದಾರೆ.
ಬಿಜೆಪಿ ಗೆದ್ದು ಸಿದ್ದರಾಮಯ್ಯ ಭ್ರಮೆ ಇಳಿಸಲಿದೆ:
ನಾನು ಮತ್ತು ಮುಖ್ಯಮಂತ್ರಿಗಳು ಕರಾವಳಿ ಭಾಗದಲ್ಲಿ ಪ್ರವಾಸ ಮಾಡಿದ್ದೇವೆ,ನಮಗೆ ಹಿಂದೆಂದೂ ಇಲ್ಲದ ಸ್ವಾಗತ ಸಿಕ್ಕಿದೆ. ಕರಾವಳಿ ಭಾಗದಲ್ಲಿ ನೂರಕ್ಕೆ ನೂರು ನಮ್ಮ ಎಲ್ಲಾ ಅಭ್ಯರ್ಥಿಗಳು ಗೆಲ್ಲುತ್ತಾರೆ.ರಾಜ್ಯದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಲಿದ್ದು ಮತ್ತೆ ಅಧಿಕಾರಕ್ಕೇರುವುದು ತಡೆಯಲು ಯಾರಿದಲೂ ಸಾಧ್ಯವಿಲ್ಲ ಎಂ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣೆಗೆದ್ದು ಖರ್ಗೆಗೆ ಗಿಫ್ಟ್ ಕೊಡುತ್ತೇವೆ ಎಂದಿರುವ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟುಮಾತನಾಡಿದ ಬಿ.ಎಸ್ ಯಡಿಯೂರಪ್ಪ " ಸಿದ್ದರಾಮಯ್ಯ ಯಾವುದೊ ಭ್ರಮೆಯಲ್ಲಿದ್ದು,ರಾಜ್ಯದ ಜನ ಅವರ ಜೇಬಿನಲ್ಲಿದ್ದಾರೆ ಎಂಬ ಭಾವನೆ ಮನಸ್ಸಲ್ಲಿದ್ದಂತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವುದು ಅಸಾಧ್ಯ.ನಾನು ಮತ್ತು ಸಿಎಂ ಬೊಮ್ಮಾಯಿ ರಾಜ್ಯದಲ್ಲಿ ಪ್ರವಾಸ ಹೊರಟಾಗ ಅಭೂತಪೂರ್ವ ಜನಬೆಂಬಲ ಸಿಕ್ಕಿದೆ. ಮೋದಿ ಅವರ ಬೆಂಬಲದೊಂದಿಗೆ ಬಿಜೆಪಿಗೆ ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಸಿಗಲಿದೆ. ಕರ್ನಾಟಕದಲ್ಲಿ ಬಿಜೆಪಿಯ ಗೆಲುವನ್ನು ತಡೆಯಲು ಸಿದ್ದರಾಮಯ್ಯನಿಂದ ಸಾಧ್ಯವಿಲ್ಲ.
ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎನ್ನುವ ನೀವು, ಬಾದಾಮಿ ಕ್ಶೇತ್ರವನ್ನು ಯಾಕೆ ಬಿಟ್ಟು ಬರುತ್ತಿದ್ದೀರಿ?ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಸೋಲು ನಿಶ್ಚಿತ. ಎಂಎಲ್ಎ ಆಗಿ ಕೆಲವೇ ಮತಗಳಿಂದ ಅಂದು ಗೆದ್ದಿದ್ದೀರಿ.ಆನಂತರ ಕ್ಷೇತ್ರವನ್ನು ಮರೆತುಬಿಟ್ಟಿದ್ದೀರಿ. ಈಗ ಬಾದಾಮಿಯನ್ನು ತೊರೆಯುತ್ತೀರಿ ಎಂಬುದು ನಿಮಗೆ ಎಷ್ಟರ ಮಟ್ಟಿಗೆ ಶೋಭೆ ತರುತ್ತದೆ.ರಾಜ್ಯದ ಜನ ಈಗಾಗಲೇ ತೀರ್ಮಾನವನ್ನು ಮಾಡಿದ್ದಾರೆ ನಿಮಗೆ ಉತ್ತರ ಕೊಡುತ್ತಾರೆ. ಅಲ್ಲದೆ ಬೇರೆಬೇರೆ ಪಕ್ಷದಿಂದ ಅನೇಕರು ಈಗಾಗಲೇ ಬಿಜೆಪಿ ಸೇರ್ಪಡೆಗೊಂಡಿದ್ದು ಇನ್ನೂ ಬರುವವರಿದ್ದಾರೆ ಎಂದು ಹೇಳಿದ್ದಾರೆ.