ಉಡುಪಿ, ನ 08 (DaijiworldNews/HR): ಹಿಂದೂ ಎನ್ನವುದು ಭಾರತೀಯ ಪದವಲ್ಲ, ಅದು ಪರ್ಷಿಯನ್ ನೆಲಕ್ಕೆ ಸೇರಿದ್ದು, ಅದೊಂದು ಅಶ್ಲೀಲ ಪದವಾಗಿದೆ ಎಂದು ಸತೀಶ್ ಜಾರಕಿಹೋಳಿ ಹೇಳಿದ್ದು, ಈ ಹೇಳಿಕೆ ವಿರುದ್ದ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ಸತೀಶ್ ಜಾರಕಿಹೋಳಿ ಹರೇ ಬರೇ ಓದಿದ ವ್ಯಕ್ತಿ. ಯಾವುದೇ ಆಳವಾದ ಅಧ್ಯಯನ ಇಲ್ಲದೆ ಮಾತನಾಡಿದ್ದಾರೆ. ಅಲ್ಪಸಂಖ್ಯಾತ ಮತ ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ಅವರ ಹೇಳಿಕೆಯಿಂದ ಭಾರತದ ಭಾವನೆಗೆ ಧಕ್ಕೆಯಾಗಿದೆ ಕ್ಷೋಭೆಭರಿತ ಹೇಳಿಕೆ ಎಂಬೂದು ದೇಶದ್ರೋಹದ ಕೆಲಸ ಎಂದರು.
ಇನ್ನು ಈ ಬಗ್ಗೆ ರಾಹುಲ್ ಗಾಂಧಿ ಸಿದ್ದರಾಮಯ್ಯ ಮೌನ ಯಾಕೆ? ನಿಮ್ಮ ಮೌನ ಸತೀಶ್ ಮಾತಿಗೆ ಸಮ್ಮತಿನಾ? ಸತೀಶ್ ಇನ್ನೂ ಸಮರ್ಥನೆ ಮಾಡ್ತಾರೆ ಹುಳಿ ಹಿಂಡುವ ಕೆಲಸ ಮಾಡ್ತಾರೆ. ದೇಶದಲ್ಲಿ ಕಾಂಗ್ರೆಸ್ ಅಲ್ಪ ಸ್ಪಲ್ಪ ಉಳಿದಿದೆ. ನೆಪಮಾತ್ರದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜನ ಮೂಲೆಯ ಸ್ಥಾನ ತೋರಿಸ್ತಾರೆ. ಇದೊಂದು ಪೂರ್ವಗ್ರಹ ಹೇಳಿಕೆ ಮತ್ತು ಯೋಜನಾಬದ್ಧವಾದ ಹೇಳಿಕೆಯಾಗಿದ್ದು, ಹಿಂದೂ ಭಾವನೆ ವಿಚಾರ ಮನಸ್ಸಿಗೆ ಘಾಸಿಯಾಗುವ ಹೇಳಿಕೆ ನೀಡಿರುವುದರಿಂದ ರಾಜ್ಯದ ಜನ ಒಕ್ಕೊರಲಿನಿಂದ ಇದನ್ನು ವಿರೋಧಿಸಬೇಕು ಎಂದಿದ್ದಾರೆ.
ಡಿಕೆ ಸುರೇಶ್ ಸಿಬಿಐಯನ್ನು ಕಿರುಕುಳ ಬ್ಯುರೊ ಆಫ್ ಇಂಡಿಯಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ತಪ್ಪು ಮಾಡದೇ ಇದ್ರೆ ಯಾಕೆ ಭಯ ಪಡುತ್ತಾರೆ. ಯಾವ ತನಿಖೆ ಬಂದ್ರೂ ನಾನು ಸಿದ್ದ ಅಂತಾರಲ್ಲ. ಒಂದು ಕಡೆ ಅದನ್ನು ಹೇಳ್ತಾರೆ, ಇನ್ನೊಂದು ಕಡೆ ಇದನ್ನು ಹೇಳ್ತಾರೆ. ತಪ್ಪು ಮಾಡದೇ ಇದ್ರೆ ಭಯ ಪಡುವ ಅವಶ್ಯಕತೆ ಇಲ್ಲ ಎಂದರು.
ಕಾಂಗ್ರೆಸ್ ಗೆದ್ದು ಖರ್ಗೆ ಅವರಿಗೆ ಗಿಫ್ಟ್ ನೀಡುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಖರ್ಗೆಯವರು ಕೂಡ ಹಿಂದೂಗಳ ಬಗ್ಗೆ ಮಾತನಾಡಿದ್ದಾರೆ. ಹಿಂದೂ ಪರ್ಷಿಯನ್ ಅಂತ ಹೇಳಿ ಅವರೂ ಕೂಡ ಇದರ ಭಾಗ ಆಗಿದ್ದಾರೆ. ಹೀಗಾಗಿ ಯಾರು ಯಾರಿಗೆ ಗಿಫ್ಟ್ ನೀಡುತ್ತಾರೆ ನೋಡೋಣ ಎಂದು ಹೇಳಿದ್ದಾರೆ.