ಮಂಗಳೂರು, ನ 07 (DaijiworldNews/SM): ಸ್ಮಾರ್ಟ್ ಸಿಟಿಯ ಸೆಂಟ್ರಲ್ ಮಾರ್ಕೆಟ್ ಕಟ್ಟಡದಲ್ಲಿ 9 ಬೀಫ್ ಸ್ಟಾಲ್ ನಿರ್ಮಾಣವಾಗುತ್ತದೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಎಲ್ಲೆಡೆಯಿಂದ ಆಕ್ರೋಶಗಳು ಕೇಳಿಬರಲಾರಂಭಿಸಿವೆ. ಹಿಂದೂ ಸಂಘಟನೆಗಳು ಇದನ್ನು ತೀವ್ರವಾಗಿ ಖಂಡಿಸಿದ್ದು, ಇದರಿಂದ ಎಚ್ಚೆತ್ತುಕೊಂಡ ಆಡಳಿತ ವರ್ಗ ಇದೀಗ ವರಸೆ ಬದಲಾಯಿಸಿದೆ.
ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಬೀಪ್ ಸ್ಟಾಲ್ ನಿರ್ಮಾಣದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ನಿರ್ಮಾಣ ಆಗಲಿರುವ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಯೋಜನೆ ಕೈ ಬಿಡದಿದ್ದಲ್ಲಿ, ನಾನು ಮುಂದಿನ ದಿನದಲ್ಲಿ ಇದ್ರ ಶಿಲಾನ್ಯಾಸನೇ ಮಾಡುವುದಿಲ್ಲ. ಈ ಹಿಂದಿನ ಸರ್ಕಾರದಲ್ಲಿ ಈ ಕಟ್ಟಡದ ಯೋಜನೆ ಹಾಕಲಾಗಿತ್ತು ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಸರ್ಕಾರ ಇತ್ತೀಚಿಗೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದೆ. ಆದ್ರೆ ಈ ಹಿಂದೆನೇ ಕಾಮಗಾರಿ ಆಗಬೇಕಿತ್ತು. ಕಾಂಗ್ರೆಸ್ ಇದಕ್ಕೆ ಕೋರ್ಟ್ ನಿಂದ ಸ್ಟೇ ತಂದಿತ್ತು. ಇಲ್ಲಿ ವಿವಿಧ ಯೋಜನೆಗಳಿಗೆ ಕಾಂಗ್ರೆಸ್ ಅಡ್ಡಿ ಪಡಿಸಿದೆ. ಈ ಯೋಜನೆ ಈ ಹಿಂದೆ ಅನುಷ್ಠಾನ ಆಗಿತ್ತು. ಗೋ ಹತ್ಯೆ ನಿಷೇಧದ ಬಳಿಕ ಈ ಯೋಜನೆ ಬದಲಾವಣೆಗೆ ಗಮನ ಹರಿಸಿರಲಿಲ್ಲ. ಈಗಾ ಈ ಬಗ್ಗೆ ಗಮನ ಹರಿಸ್ತೇವೆ. ಸೆಂಟ್ರಲ್ ಮಾರ್ಕೆಟ್ ನಲ್ಲಿ ಯಾವುದೇ ಬೀಫ್ ಸ್ಟಾಲ್ ಆಗದಂತೆ ನೋಡ್ತೇವೆ ಎಂದು ಶಾಸಕ ವೇದವ್ಯಾಸ್ ಕಾಮತ್ ಪ್ರತಿಕ್ರಿಯೆ ನೀಡಿದ್ದಾರೆ.