ಕುಂದಾಪುರ,ನ 07(DaijiworldNews/MS): ನವೆಂಬರ್ 7ರಂದು ಸಂಜೆ ಬೈಂದೂರು ತಾಲೂಕಿನ ಮುಳ್ಳಿಕಟ್ಟೆಯಲ್ಲಿ ಹಮ್ಮಿಕೊಳ್ಳಲಾದ ಬಿಜೆಪಿ ಪ್ರಾಯೋಜಿತ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮನೆ ಮನೆಗೆ ಕುಡಿಯುವ ನೀರು, ಮರವಂತೆ ಮೀನುಗಾರಿಕೆ ಬಂದರು, ಏತ ನೀರಾವರಿ ಯೋಜನೆ ಸಹಿತ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಲಿರುವ ಮುಖ್ಯಮಂತ್ರಿ ಬೊಮ್ಮಾಯಿಯವರ ಆಡಳಿತ ಪಕ್ಷವು ಜಿಲ್ಲಾಡಳಿತವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ದೂರಿದ್ದಾರೆ.
ಅವರು ಸೋಮವಾರ ಮಧ್ಯಾಹ್ನ ಕುಂದಾಪುರದ ಹೊಟೇಲ್ ಶೆರೋನ್ ನಲ್ಲಿ ಕರೆಯಲಾದ ಪತ್ರಿಕಾಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದರು. ಸಮಾವೇಶಕ್ಕೆ ಶಿಕ್ಷಣ ಇಲಾಖೆಯನ್ನು ದುರುಪಯೋಗಪಡಿಸಿಕೊಂಡಿರುವುದನ್ನು ಖಂಡಿಸಿದ ಅವರು, ಅಂಗನವಾಡಿ ಕಾರ್ಯಕರ್ತೆಯರನ್ನು, ಆಶಾ ಕಾರ್ಯಕರ್ತೆಯರನ್ನು, ವಿವಿಧ ಸ್ವಸಹಾಯ ಸಂಘಗಳನ್ನು ಒತ್ತಾಯಪೂರ್ವಕ ಕರೆತರುವ ಹೇಯ ಮನಸ್ಥಿತಿಗೆ ಬಿಜೆಪಿ ಮುಂದಾಗಿರುವುದು ನಾಚಿಕೆಗೇಡು ಎಂದರು.
ನನ್ನ ಅವಧಿಯಲ್ಲಾದ ಕಾಮಗಾರಿಗಳನ್ನೂ ಬಿಜೆಪಿ ತನ್ನ ಪಟ್ಟಿಯಲ್ಲಿ ಸೇರಿಕೊಳ್ಳುವ ಮೂಲಕ ಸಮಾವೇಶ ಕ್ಷೇತ್ರದ ಅಭಿವೃದ್ದಿಯ ಕಾರ್ಯಕ್ರಮವಾಗದೇ ಬಿಜೆಪಿ ಚುನಾವಣಾ ಗಿಮಿಕ್ ಆಗಿದೆ ಎಂದರು.
ಸೌಡ ಸೇತುವೆ ಹಾಗೂ ಕಬ್ಬಿನಾಲೆ ಸೇತುವೆಗೆ ಕಾಂಗ್ರೆಸ್ ಅವಧಿಯಲ್ಲಿಯೇ ಮಂಜೂರಾತಿಯಾಗಿತ್ತು ಎಂದ ಅವರು, ಕೊಡೇರಿ ಬಂದರಿಗೆ ಲಕ್ಷ್ಮೀನಾರಾಯಣರ ಅವಧಿಯಲ್ಲಿ 30 ಕೋಟಿ ಹಾಗೂ ನನ್ನ ಅವಧಿಯಲ್ಲಿ 33 ಕೋಟಿ ಅನುದಾನ ಬಿಡುಗಡೆಯಾಗಿತ್ತು ಅದೇ 63 ಕೋಟಿಯನ್ನು ತಮ್ಮ ಸಾಧನೆ ಎಂದು ಸತ್ಯವನ್ನು ಮರೆ ಮಾಚಲಾಗಿದೆ ಎಂದು ಆರೋಪಿಸಿದರು.
ಜಿಲ್ಲಾಡಳಿತವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡು ಈ ಸಮಾವೇಶ ನಡೆಸಲಾಗುತ್ತಿದ್ದು, ಬೈಂದೂರಿನ ಜನ ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದರು. ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಶರತ್ ಶೆಟ್ಟಿ ಉಪಸ್ಥಿತರಿದ್ದರು