ಉಡುಪಿ, ನ 07 (DaijiworldNews/HR): ಮುರುಗಾ ಶ್ರೀಗಳ ಮೇಲೆ ಪೋಕ್ಸೋ ಪ್ರಕರಣದ ಬಗ್ಗೆ ಈಗಾಗಲೇ ಕೋರ್ಟ್ ನಲ್ಲಿ ತನಿಖೆ ನಡೆಯುತ್ತಿದ್ದು, ಕಾನೂನು ಅದರ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಮುರುಘಾ ಮಠದ ಶ್ರೀಗಳ ವಿರುದ್ಧ 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಜನ ಸಂಕಲ್ಪ ಸಮಾವೇಶಕ್ಕೆ ಜಿಲ್ಲೆಗೆ ಆಗಮಿಸಿದ ಸಿಎಂ ಅಂಬಲಪಾಡಿಯ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಮಠದ ಶ್ರೀಗಳ ವಿರುದ್ಧ ತನಿಖೆ ನಡೆಸಿರುವ ಡಿವೈಎಸ್ಪಿ ಅನಿಲ್ ನೇತೃತ್ವದ ತಂಡ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ ಎಂದರು.
ಇನ್ನು ಜನ ಸಂಕಲ್ಪ ಯಾತ್ರೆ ಮುಗಿದ ಬಳಿಕ ಏರಡೂ ದಿಕ್ಕಿನಿಂದ ರಥಯಾತ್ರೆ ನಡೆಯಲಿದೆ 724 ಕ್ಷೇತ್ರಗಳನ್ನು ಭೇಟಿ ಮಾಡುವ ಯೋಜನೆ ಇದೆ ಎಂದರು.
ಕಾಂಗ್ರೆಸ್ ಪಕ್ಷ ಭ್ರಮೆಯಲ್ಲಿದ್ದು, ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯಿಂದ ಈಗಾಗಲೇ ಜನರು ಪಕ್ಷವನ್ನು ತಿರಸ್ಕಾರ ಮಾಡಿರುವುದು ಗೊತ್ತಿರುವ ವಿಷಯ, ರಾಜ್ಯವನ್ನು ಅಧೋಗತಿಗೆ ತಂದು ನಿಲ್ಲಿಸಿದ್ದನ್ನು ಕರ್ನಾಟಕದ ಜನತೆ ಎಂದೂ ಮರೆಯುವುದಿಲ್ಲ.ಈ ಹಿಂದೆ ಯಡಿಯೂರಪ್ಪ, ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಲ್ಲ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮುಂದಿನ ಮುಖ್ಯಮಂತ್ರಿ ತಾನೇ ಎಂಬ ಹೇಳಿಕೆಯನ್ನು ಸಿದ್ಧರಾಮಯ್ಯ ನೀಡಿದ್ದರು, ಸಿದ್ಧರಾಮಯ್ಯ ಹೇಳಿದ್ದು ಯಾವುದೂ ಕೂಡ ಈ ವರೆಗೆ ನಡೆದಿಲ್ಲ ಎಂದು ಹೇಳಿದ್ದಾರೆ.