ಉಡುಪಿ, ನ 07 (DaijiworldNews/HR): ಕಾಪುವಿನಲ್ಲಿ ನಡೆಯಲಿರುವ ಜನ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲು ಸಿಎಂ ಬೊಮ್ಮಾಯಿ ಉಡುಪಿಗೆ ಆಗಮಿಸಿದ್ದು, ಅವರಿಗೆ ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ, ಎಸ್ ಅಂಗಾರ ಕೋಟ ಶ್ರೀನಿವಾಸ ಪೂಜಾರಿ ಸಾಥ್ ನೀಡಿದ್ದಾರೆ.
ಈ ವೇಳೆ ಉಡುಪಿಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಕಾಪುವಿನಿಂದ ಜನ ಸಂಕಲ್ಪ ಯಾತ್ರೆ ಪ್ರಾರಂಭವಾಗಿದ್ದು, ನಾಳೆಯಿಂದ ಗದಗ, ಬೆಳಗಾಂ, ಹಾವೇರಿಯಲ್ಲಿ ಸಂಕಲ್ಪಯಾತ್ರೆ ಮುಂದುವರಿಯುತ್ತದೆ. ಪ್ರತಿಯೊಂದು ಕ್ಷೇತ್ರಕ್ಕೂ ಭೇಟಿಕೊಟ್ಟು ಪಕ್ಷ ಸಂಘಟನೆ ಮತ್ತು ಜನಸ್ಪಂದನ ಮಾಡುತ್ತೇವೆ. ಎಲ್ಲಾ ಕಡೆಯಿಂದಲೂ ಬಹುತೇಕ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ ರಾಜ್ಯದಾದ್ಯಂತ ಕಾರ್ಯಕರ್ತರಲ್ಲಿ ಉತ್ಸಾಹ ಕಾಣುತ್ತಿದ್ದೇವೆ ಎಂದರು.
ಇನ್ನು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ನಾವೇ ಅಧಿಕಾರಕ್ಕೆ ಬರ್ತೇವೆ ಎಂದು ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ. ಅವರು ಈವರೆಗೆ ಹೇಳಿದ್ದು ಎಂದೂ ಸತ್ಯವಾಗಿಲ್ಲ. ಐದು ವರ್ಷ ಆಡಳಿತ ಸಂದರ್ಭ ನಾವೇ ಬರ್ತೀವಿ ಎನ್ನುತ್ತಿದ್ದರು ಆದರೆ ಯಡಿಯೂರಪ್ಪನೂ ಮತ್ತೆ ಮುಖ್ಯಮಂತ್ರಿಯಾದ್ರು. ಬರೆದಿಟ್ಟುಕೊಂಡು ಬಿಡಿ, ಸಿದ್ದರಾಮಯ್ಯ ಹೇಳಿದ್ದು ಯಾವತ್ತೂ ಸತ್ಯ ಆಗಲ್ಲ ಎಂದರು.
ಕಾಂಗ್ರೆಸ್ ಗೆಲ್ಲುತ್ತದೆ ಎಂದು ಸಿದ್ದರಾಮಯ್ಯರ ಹೇಳಿದ ಒಂದು ಭ್ರಮೆ. ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ನಾವೇ ಬರುತ್ತೇವೆ ಎಂದು ಹೇಳಿದ್ದರು. ಅಧಿಕಾರ ಮಾಡಿ ಕಾರ್ಯಕ್ರಮ ಕೊಟ್ಟಾಗಲೇ ಜನ ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ. ಸಮಾಜವನ್ನು ಒಡೆದು ಆಳುವ ನೀತಿಯಿಂದ ಕರ್ನಾಟಕವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿದ್ದಾರೆ. ಸಿದ್ದರಾಮಯ್ಯನವರು ಹೇಳಿದ ಮಾತುಗಳು ಯಾವತ್ತಿಗೂ ಸತ್ಯವಾಗಿಲ್ಲ ಎಂದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ನೀಡಿರುವ ಸಿಎಂ, ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ. ಐವತ್ತು ವರ್ಷ ಪೂರ್ಣ ಭ್ರಷ್ಟ ಸರ್ಕಾರವೇ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಭ್ರಷ್ಟಾಚಾರ ಆರಂಭವಾಗಿದ್ದೆ ಕಾಂಗ್ರೆಸ್ ನಿಂದ. ಕಾಂಗ್ರೆಸ್ ಕಾಲದಲ್ಲಿ ದಾಖಲೆ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗಿದೆ. ನಮ್ಮ ಆರೋಪ ಮುಚ್ಚಿ ಹಾಕಿಕೊಳ್ಳಲು ಖರ್ಗೆ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.