ಕಾಸರಗೋಡು, ಫೆ 20(SM): ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ಆರೋಪಿಯನ್ನು ಇಂದು ಮಧ್ಯಾಹ್ನ ಘಟನಾ ಸ್ಥಳಕ್ಕೆ ಕೊಂಡೊಯ್ದು ಮಾಹಿತಿ ಕಲೆ ಹಾಕಿದ್ದು, ಘಟನಾ ಸ್ಥಳದ ಅಲ್ಪ ದೂರದ ನಿರ್ಜನ ಪ್ರದೇಶವೊಂದರ ರಬ್ಬರ್ ತೋಟದಲ್ಲಿನ ಪಾಲು ಬಾವಿಯಿಂದ ಕೃತ್ಯಕ್ಕೆ ಬಳಸಿದೆನ್ನಲಾದ ನಾಲ್ಕು ಕಬ್ಬಿಣದ ರಾಡ್ ಮತ್ತು ಒಂದು ತಲವಾರನ್ನು ಪತ್ತೆ ಹಚ್ಚಿದೆ.
ಮಧ್ಯಾಹ್ನ ವಿಶೇಷ ತನಿಖಾ ತಂಡವು ಆರೋಪಿಯಾಗಿರುವ ಎ. ಪೀತಾಂಬರನ್ ನನ್ನು ಪೆರಿಯ ಕಲ್ಯೊಟ್ ಗೆ ಕರೆದೊಯ್ದು ಮಾಹಿತಿ ಕಲೆ ಹಾಕಿತು. ಕೃತ್ಯದ ಬಳಿಕ ಆರೋಪಿಗಳು ಮಾರಾಕಾಸ್ತ್ರವನ್ನು ಬಾವಿಗೆ ಎಸೆದು ಪರಾರಿಯಾಗಿದ್ದರು.
ಕೃತ್ಯ ನಡೆಸಿದ ಸ್ಥಳಕ್ಕೆ ಆರೋಪಿಯನ್ನು ಕರೆ ತರಲಾಗಿತ್ತಾದರೂ ಸ್ಥಳೀಯರು ಆರೋಪಿಯ ಮೇಲೆ ಹಲ್ಲೆಗೆ ಮುಂದಾಗಿದ್ದು್,ಇದರಿಂದ ಅಲ್ಲಿಂದ ಆರೋಪಿಯನ್ನು ಮಾರಕಾಸ್ತ್ರ ಬಚ್ಚಿಟ್ಟ ಸ್ಥಳಕ್ಕೆ ಕರೆದೊಯ್ಯಲಾಯಿತು.
ಆರೋಪಿಯನ್ನು ಸಂಜೆ ಹೊಸದುರ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು , ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.