ಬಂಟ್ವಾಳ, ನ 05 (DaijiworldNews/HR): ಸರಕಾರ ತೆಗೆದುಕೊಂಡ ಕೆಲವೊಂದು ನಿರ್ಧಾರಗಳಿಂದ ಇಂದು ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದ್ದು, ಅತೀ ದೊಡ್ಡ ಶತ್ರುವಾಗಿ ಜನರ ಜೀವ ಹಿಂಡುತ್ತಿದೆ ಎಂದು ಎ.ಐ.ಟಿ.ಯು.ಸಿ.ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಡಿ.ಎ.ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡುವ ಕ್ರಮ ಸರಕಾರ ಕೈಗೊಳ್ಳುತ್ತಿಲ್ಲ. 40 ಪರ್ಸೆಂಟ್ ಸರಕಾರ ಎಂದು ಹೆಸರು ವಾಸಿಯಾದ ಬಿಜೆಪಿ ಸರಕಾರ ಕೋವಿಡ್ ನ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಿದೆ. ಕಟ್ಟಡ ಇಲಾಖೆಯಲ್ಲಿ ಸಾಕಷ್ಟು ಹಣವಿದೆ ಎಂಬ ಕಾರಣಕ್ಕಾಗಿ ಬೋಗಸ್ ಮೆಂಬರ್ ಶಿಪ್ ಮಾಡಿ ಹಣ ದೋಚುವ ಕಾರ್ಯವನ್ನು ಜನಪ್ರತಿನಿಧಿಗಳ ಹಿಂಬಾಲಕರು ಮಾಡುತ್ತಿದ್ಧಾರೆ ಎಂದು ಆರೋಪ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾರ್ಮಿಕರ ಬವಣೆ ದಿನೇ ದಿನೇ ಹೆಚ್ಚುತ್ತಿದ್ದು, ಅಸಂಘಟಿತ ಕಾರ್ಮಿಕರಿಗೆ ರಾಜ್ಯದಲ್ಲಿ ಜೀವನ ನಡೆಸುವುದೇ ದುಸ್ತರವಾಗಿದೆ. ನಿರಂತರವಾಗಿ ಏರುತ್ತಿರುವ ಬೆಲೆ ಏರಿಕೆಯಿಂದ ಜನಸಾಮಾನ್ಯರು ಏದುಸಿರು ಬಿಡುವಂತಾಗಿದೆ. ರೈತ ಸಮುದಾಯದ ಬಿಟ್ಟರೆ ಅತೀ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವ ವರ್ಗ ಇದ್ದರೆ ಕೆ.ಎಸ್.ಆರ್.ಟಿ.ಸಿ.ನೌಕರರು ಅವರ ಸಮಸ್ಯೆ ಗಳನ್ನು ಆಲಿಸಿ ಪರಿಸ್ಥಿತಿ ಯನ್ನು ಸುಧಾರಣೆ ಮಾಡಬೇಕು ಎಂದರು.
ಕಟ್ಟಡ ಕಾರ್ಮಿಕರ ಬಗ್ಗೆ, ಬೀಡಿ ಉದ್ಯಮ ಬಗ್ಗೆ, ಕೆ.ಎಸ್.ಆರ್.ಟಿ.ಸಿ.ನೌಕರರ ಬಗ್ಗೆ, ಯೋಜನಾ ಕಾರ್ಮಿಕರ ಸಮಸ್ಯೆಗಳನ್ನು ಸರಕಾರ ಪರಿಹಾರ ಮಾಡಬೇಕು ಎಂದು ಒತ್ತಾಯ ಮಾಡಿದ ಅವರು, ಪಿಂಚಣಿದಾರರಿಗೆ ರೂ.6000 ಪಿಂಚಣಿ ನೀಡಬೇಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಚ್.ವಿ.ರಾವ್. ಶೇಖರ್, ಸುರೇಶ್ ಕುಮಾರ್, ಪ್ರವೀಣ್ ಕುಮಾರ್, ಸೀತಾರಾಮ ಮತ್ತಿತರರು ಉಪಸ್ಥಿತರಿದ್ದರು.