Karavali
ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಹನ್ನೆರಡನೇ ಘಟಿಕೋತ್ಸವ
- Sat, Nov 05 2022 07:31:15 PM
-
ನಿಟ್ಟೆ, ನ 05 (DaijiworldNews/HR): ದೇಶ ಅನೇಕ ಬೃಹತ್ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳಿಗೆ ಸಮರ್ಥ ಉತ್ತರಗಳನ್ನು ಕಂಡುಕೊಳ್ಳುವ ಗುರುತರ ಹೊಣೆ ನಮ್ಮ ಯುವಜನತೆಯ ಮೇಲಿದೆ. ಮೇಧಾವಿಗಳಿಂದ ಕೂಡಿದ ತಂಡಗಳು ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಬೇಕು, ತನ್ಮೂಲಕ ಭಾರತ ದೇಶ ಅಭಿವೃದ್ಧಿಯ ಪರಾಕಾಷ್ಟೆ ತಲುಪುವಂತೆ ಮಾಡಬೇಕು. ಇಂತಹ ಅಪೂರ್ವ ಯಶಸ್ಸು ಪ್ರಾಪ್ತವಾಗಬೇಕಾದರೆ ನಮ್ಮೊಳಗಿನ ಒಗಟ್ಟು ಹಾಗೂ ಬದ್ಧತೆ ಸದಾ ಜಾಗೃತವಾಗಿರಬೇಕು. ಅಗ ಮಾತ್ರ ಭವಿಷ್ಯದಲ್ಲಿ ಭಾರತ ಇಡೀ ಜಗತ್ತನ್ನೇ ಮುನ್ನಡೆಸಬಲ್ಲ ಸಾಮರ್ಥ್ಯ ಪಡೆಯುತ್ತದೆ' ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಪ್ರೊ. ಎಂ. ಜಗದೀಶ್ ಕುಮಾರ್ ನುಡಿದರು.
ಮಂಗಳೂರಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಹನ್ನೆರಡನೇ ಘಟಿಕೋತ್ಸವದ ವಿಧ್ಯುಕ್ತ ಭಾಷಣವನ್ನು ಮಾಡಿದ ಅವರು, '16ರಿಂದ 25ರ ವಯೋಮಿತಿಯಲ್ಲಿರುವ ಯುವಜನರಲ್ಲಿ ಶೇಕಡಾ ಹತ್ತರಷ್ಟು ಮಂದಿ ಮಾತ್ರ ಉನ್ನತ ಶಿಕ್ಷಣಗಳಿಸಲು ಸಾಧ್ಯ. ಅದಕ್ಕಾಗಿ ನಮ್ಮ ನೂತನ ಪದವೀಧರರು ತಮ್ಮ ತಂದೆ ತಾಯಿಗಳಿಗೆ, ಗುರುಗಳಿಗೆ ಹಾಗೂ ಪ್ರೋತ್ಸಾಹಿಸಿ ಕಲಿಕೆಗೆ ವೇದಿಕೆ ಕಲ್ಪಿಸಿದ ನಿಟ್ಟೆ ವಿಶ್ವವಿದ್ಯಾಲಯದಂತಹ ಪ್ರಾಮಾಣಿಕ ವಿದ್ಯಾ ಸಂಸ್ಥೆಗಳಿಗೆ ಋಣಿಯಾಗಿರಬೇಕು. ನಮ್ಮ ಮುಂದಿನ ಹಾದಿ ವೈವಿಧ್ಯಮಯ ಸವಾಲುಗಳಿಂದ ದುರ್ಗಮವಾಗಿರುತ್ತದೆ. ಆದರೆ ನಿಮ್ಮೊಳಗಿನ ಸತ್ವವನ್ನು ನೀವು ಅರಿತರೆ ಹಾಗೂ ಸೋಲುಗಳನ್ನು ಲೆಕ್ಕಿಸದೆ ಆತ್ಮವಿಶ್ವಾಸದಿಂದ ಮುಂದುವರಿದರೆ ಗೆಲುವು ಖಚಿತ. ಆದಿಶಂಕರರು ಹೇಳಿದಂತೆ ಪಠನ, ಮನನ, ಚಿಂತನ ಹಾಗೂ ಸಂಕೀರ್ತನ ಸದಾ ನಿಮ್ಮ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳಾಗಬೇಕು. ಆಗ ಸೃಜನಶೀಲತೆ ಪ್ರತಿಯೊಬ್ಬರಲ್ಲೂ ಪ್ರಾದುರ್ಭಾವಗೊಳ್ಳುತ್ತದೆ ಹಾಗೂ ಹೊಸ ಹೊಸ ದರ್ಶನಗಳ ಸಾಕ್ಷಾತ್ಕಾರವಾಗುತ್ತದೆ. ಯಾರೇ ಯಶಸ್ವೀ ವ್ಯಕ್ತಿ ಕೇವಲ ಕಲಿಕೆಯಿಂದ ಸಾಧನೆ ಮಾಡಿರುವ ಉದಾಹರಣೆಗಳಿಲ್ಲ. ನಿರಂತರ ಕಲಿಕೆ, ಆತ್ಮಾನುಸಂಧಾನ, ಜೀವನಾನುಭವ ಹಾಗೂ ಛಲ ನಮ್ಮನ್ನು ಯಶೋಪಥದಲ್ಲಿ ಕೊಂಡೊಯ್ಯುತ್ತವೆ. ಭಗೀರಥ ಗಂಗಾ ಮಾತೆಯನ್ನು ಈ ಭೂಮಿಗೆ ತಂದ ಕಥೆ ನಮಗೆ ಸದಾ ಸ್ಫೂರ್ತಿಯಾಗಬೇಕು. ಭಗೀರಥನ ಯತ್ನದಲ್ಲಿ ಎಂತೆಂತಹ ತಿರುವುಗಳು ಬಂದವು, ಅಸಹಾಯಕ ಸನ್ನಿವೇಶಗಳನ್ನು ಸೃಷ್ಟಿಯಾದವು, ಇವೆಲ್ಲವುದರ ನಡುವೆ ಅವನು ಹೇಗೆ ಗಂಗೆಯನ್ನು ಭೂಮಿಗೆ ಕರೆತಂದ ಹಾಗೂ ಮನುಕುಲವನ್ನು ಕಾಪಾಡಿದ ಎಂಬ ರೋಚಕ ಕಥೆ ನಮಗೆ ಸದಾ ಆದರ್ಶವಾಗಲಿ. ನೀವೆಲ್ಲರೂ ಭಗೀರಥರಾಗಿ ವಿಜೃಂಭಿಸಿ ಹಾಗೂ ಈ ದೇಶದ ಸತ್ಪ್ರಜೆಗಳಾಗಿ ಮಹತ್ವದ ಕಾಣಿಕೆ ಸಲ್ಲಿಸಿ ಎಂದರು.
ಇನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರಜ್ಞಾವಂತರನ್ನಾಗಿಸುವ ಹೊಣೆ ವಿದ್ಯೆ ಕಲಿಸುವ ಸಂಸ್ಥೆಗಳದ್ದು. ನಿಟ್ಟೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಎಲ್ಲ ಸಂಸ್ಥೆಗಳೂ ವಿದ್ಯಾರ್ಥಿಗಳು ನಮ್ಮ ಗ್ರಾಮೀಣ ಬದುಕಿನ ಕಷ್ಟ ಕಾರ್ಪಣ್ಯಗಳನ್ನು ಅರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿವೆ. ಮೂಲತಃ ನಮ್ಮ ವಿದ್ಯಾ ಸಂಸ್ಥೆಗಳು ಪ್ರಾರಂಭವಾದದ್ದೇ ಹಳ್ಳಿಗಾಡಿನ ಪರಿಸರಗಳಲ್ಲಿ. ಕಾಲಕ್ರಮೇಣ ಈ ತಾಣಗಳು ಈಗ ಅಭಿವೃದ್ಧಿಯ ಸಲುವಾಗಿ ನಗರಗಳಂತೆ ಗೋಚರಿಸುತ್ತಿವೆ. ನಮ್ಮ ವೈದ್ಯಕೀಯ ವಿದ್ಯಾರ್ಥಿಗಳು ನಮ್ಮ ಸಂಸ್ಥೆ ಸ್ಥಾಪಿಸಿರುವ 30ಕ್ಕೂ ಹೆಚ್ಚು ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಕೂಡ ಕಲಿಯುತ್ತಾರೆ. ಇದರಿಂದ ಅವರು ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ ಎಂಬ ಭರವಸೆ ನನಗಿದೆ ಎಂದು ನುಡಿದರು.
ಘಟಿಕೋತ್ಸವದಲ್ಲಿ ಭಾರತ ಸರ್ಕಾರದ ವಿಜ್ಞಾನ-ತಂತ್ರಜ್ಞಾನ ಮಂತ್ರಾಲಯದ ವಿಶ್ರಾಂತ ಹಿರಿಯ ಸಲಹೆಗಾರರು ಹಾಗೂ ದೇಶದ ಪ್ರತಿಷ್ಠಿತ ವಿಜ್ಞಾನಿ ಪ್ರೊ. ಟಿ.ಎಸ್. ರಾವ್ ಅವರಿಗೆ ಗೌರವ ಡಾಕ್ಟರೇಟ್ ಅಂದರೆ 'ಡಾಕ್ಟರ್ ಆಯಡ್ ಸೈನ್ಸ್' (ಹಾನರಿಸ್ ಕೌಸಾ) ನೀಡಲಾಯಿತು. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತರಾಗಿರುವ ಶ್ರೀಯುತರು ಪೋಲಿಯೋ ನಿರ್ಮೂಲನಾ ಆಂದೋಲನದಲ್ಲಿ ವಹಿಸಿದ್ದ ನಾಯಕತ್ವವನ್ನು ಶ್ಲಾಘಿಸಲಾಯಿತು. ತಮಗೆ ಸಂದ ವಿಶೇಷ ಗೌರವಕ್ಕೆ ಪ್ರತಿಕ್ರಯಿಸಿದ ಡಾ. ರಾವ್, 'ಈ ಅಪೂರ್ವ ಪದವಿ ನನ್ನಂತಹ ಸಹಸ್ರಾರು ವಿಜ್ಞಾನಿಗಳಿಗೆ ಹೊಸ ಹೊಸ ಅನ್ವೇಷಣೆಗಳನ್ನು ಬದ್ಧತೆಯಿಂದ ಕೈಗೊಳ್ಳಲು ಪ್ರೇರಣೆ ನೀಡುತ್ತದೆ ಎಂದರು.
ಅಲ್ಲದೆ ವಿವಿಧ ಅಧ್ಯಯನ ವಿಚಾರಗಳಲ್ಲಿ ಸಾಧನೆ ಮಾಡಿದ ಸಂಶೋಧಕರಿಗೆ 21 ಡಾಕ್ಟೋರಲ್, 324ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಗಳು, 647ಸ್ನಾತಕ ಪದವಿಗಳನ್ನು ಪ್ರದಾನ ಮಾಡಲಾಯಿತು. ಅಲ್ಲದೆ ಈರ್ವರು ವಿದ್ವಾಂಸರಿಗೆ ಫೆಲೋಶಿಪ್ಗಳನ್ನೂ ನೀಡಲಾಯಿತು. ವೈದ್ಯಕೀಯ, ದಂತ ವೈದ್ಯಕೀಯ, ಔಷಧ ವಿಜ್ಞಾನ, ಅನ್ವಯಿಕ ಆರೋಗ್ಯ ವಿಜ್ಞಾನ, ನರ್ಸಿಂಗ್, ಮಾಧ್ಯಮ ಮತ್ತು ಸಂವಹನ, ವಾಸ್ತುಶಿಲ್ಪ - ಹೀಗೆ ಹತ್ತು ಹಲವು ಅಧ್ಯಯನ ವಿಭಾಗಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಈ ಘಟಿಕೋತ್ಸವದಲ್ಲಿ ಪದವಿಗಳನ್ನು ಗಳಿಸಿದರು.
ಇದೇ ಸಂದರ್ಭದಲ್ಲಿ ಅಪೂರ್ವ ಸಾಧನೆ ಮಾಡಿದ ಹಾಗೂ ಅಪ್ರತಿಮ ಪ್ರತಿಭೆಯನ್ನು ಸಾಬೀತು ಪಡಿಸಿದ ವಿದ್ಯಾರ್ಥಿಗಳಿಗೆಒಟ್ಟು೨೦ಚಿನ್ನದ ಪದಕಗಳು,೯ದತ್ತಿ ಪದಕಗಳು ಹಾಗೂ೧೧ವಿಶ್ವವಿದ್ಯಾಲಯ ಪದಕಗಳನ್ನು ವಿತರಿಸಲಾಯಿತು.ಪ್ರಾರಂಭದಲ್ಲಿ ಸರ್ವರನ್ನೂ ಸ್ವಾಗತಿಸಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಅವರು ಮಾತನಾಡಿ ಇಡೀ ದೇಶದಲ್ಲಿಯೇ ರಾಷ್ಟ್ರೀಯ ಸಾಂಸ್ಥಿಕ ರ್ಯಾಂಕಿಂಗ್ ಚೌಕಟ್ಟು ಅಂದರೆ ಎನ್.ಐ.ಆರ್.ಎಫ್ ಪಟ್ಟಿಯಲ್ಲಿ 75ನೇಸ್ಥಾನ ಗಳಿಸಿರುವ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ, ರಾಷ್ಟ್ರೀಯ ಮೌಲ್ಯಾಂಕನ ಹಾಗೂ ಮಾನ್ಯತಾ ಸಮಿತಿ ಅಂದರೆ 'ನ್ಯಾಕ್' ನಿಂದ 'ಎ ಪ್ಲಸ್' ಮಾನ್ಯತೆ ಗಳಿಸಿರುವುದು ಹೆಮ್ಮೆ ತಂದಿದೆ ಎಂದರು.
ವಿಶ್ವವಿದ್ಯಾಲಯದ ಆಸ್ಪತ್ರೆ ಆಡಳಿತ ವಿಭಾಗದ ಸಹ-ಕುಲಾಧಿಪತಿಗಳಾದ ಪ್ರೊ. ಡಾ. ಎಂ. ಶಾಂತಾರಾಮ್ ಶೆಟ್ಟಿ, ಆಡಳಿತ ವಿಭಾಗದ ಸಹ-ಕುಲಾಧಿಪತಿ ವಿಶಾಲ್ ಹೆಗ್ಡೆ, ಸಹ ಕುಲಪತಿ ಪ್ರೊ. ಡಾ. ಎಂ. ಎಸ್. ಮೂಡಿತ್ತಾಯ, ಕುಲಸಚಿವ ಪ್ರೊ. ಡಾ. ಹರ್ಷ ಹಾಲಹಳ್ಳಿ ಹಾಗೂ ಪರೀಕ್ಷಾ ನಿಯಂತ್ರಕರಾದ ಪ್ರೊ. ಡಾ. ಪ್ರಸಾದ್ ಬಿ. ಶೆಟ್ಟಿ ಉಪಸ್ಥಿತರಿದ್ದರು.