ಉಡುಪಿ,ಫೆ 20(MSP):ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಅಲ್ಪಸಂಖ್ಯಾತ ವಿರೋಧಿ ಎಂದು ದಕ್ಷಿಣ ಕನ್ನಡ ಮುಸ್ಲೀಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಅಶ್ರಫ್ ನೀಡಿದ ಹೇಳಿಕೆ ಸತ್ಯಕ್ಕೆ ದೂರವಾದ ವಿಚಾರ.
ಸರ್ವಧರ್ಮ ಪ್ರೇಮಿ ಶುದ್ಧಹಸ್ತ ರಾಜಕಾರಣಿ, ಹಸನ್ಮುಖಿ, ಎಲ್ಲರ ನೆಚ್ಚಿನ ಸೊರಕೆಯ ಬಗ್ಗೆ ಅಪಪ್ರಚಾರ ಮಾಡುವವರು, ಕಾಪು ಉಡುಪಿ ಭಾಗದ ಮುಸ್ಲಿಂ ಸಮುದಾಯದವರಲ್ಲಿ ಬಂದು ಕೇಳಿದರೆ ಅವರ ಜನಪ್ರಿಯತೆ ಹಾಗೂ ಅವರು ಅಲ್ಪಸಂಖ್ಯಾತರ ಬಗ್ಗೆ ಎಷ್ಟು ಕಾಳಜಿ ವಹಿಸಿದ್ದಾರೆ ಎಂದು ತಿಳಿಯುತ್ತೆ. ಪುತ್ತೂರು ಶಾಸಕರಾಗಿದ್ದಾಗಲೂ, ಉಡುಪಿಯ ಸಂಸದರಾಗಿದ್ದಾಗಲೂ, ಕಾಪುವಿನ ಶಾಸಕರಾಗಿದ್ದ ವೇಳೆಯಲ್ಲೂ ಎಲ್ಲಾ ಧರ್ಮದ ಜನರಿಗೂ ಸಮಾನವಾಗಿ ನೋಡಿದ ಹೆಗ್ಗಳಿಕೆ ಅವರದು, ಅದೇ ರೀತಿ ಯಾವ ಕೋಮುವಾದಿ ಶಕ್ತಿಗಳಿಗೂ ತಲೆ ಎತ್ತದ ರೀತಿ ಅಭಿವೃದ್ಧಿ ಎಂಬ ಮಂತ್ರದಲ್ಲಿಯೇ ಜನಮನ ಸೆಳೆದ ಅಪರೂಪದ ನಾಯಕ ಸೊರಕೆ ಆಗಿದ್ದಾರೆ.
ಸೊರಕೆ ಕಾಪುವಿನ ಶಾಸಕರಾಗಿದ್ದ ಅವಧಿಯಲ್ಲಿಯೇ ಕಾಪು ಪುರಸಭೆಯಾಗಿ, ತಾಲೂಕಾಗಿ ರೂಪಿತವಾಗಿತ್ತು ಕಾಪು ಪುರಸಭೆಯ ಸದಸ್ಯರಲ್ಲಿ, 5 ಮಂದಿ ಮುಸ್ಲಿಮರು ಎನ್ನುವುದು ಗಮನಾರ್ಹ.ಅದೇ ರೀತಿ ತಾಲೂಕು ಪಂಚಾಯತು ಚುನಾವಣೆಯಲ್ಲಿ ಎರಡು ಅಲ್ಪಸಂಖ್ಯಾತ ಅಭ್ಯರ್ಥಿಗಳು ಕಣಕ್ಕಿಳಿಸಿದ್ದರು.ಅವರ ಅವಧಿಯಲ್ಲಿ ಅತೀ ಹೆಚ್ಚು ಮೊತ್ತದ ಅನುದಾನ ಅಲ್ಪಸಂಖ್ಯಾತ ವಿಭಾಗಕ್ಕೆ ಸರ್ಕಾರದ ಮೂಲಕ ಹರಿದುಬಂದಿತ್ತು. ಮಂದಿರ ಮಸೀದಿ ಚರ್ಚುಗಳಿಗೆ ಅತೀ ಹೆಚ್ಚು ಅನುದಾನ ಒದಗಿಸಿದ್ದು, ಇಲ್ಲಿನ ಮುಸ್ಲಿಮರು ಮತ್ತು ಎಲ್ಲಾ ಧರ್ಮೀಯರು ಮರೆಯಲು ಸಾಧ್ಯವಿಲ್ಲದಂತ ಕೆಲಸ ಮಾಡಿರುತ್ತಾರೆ.ಎಲ್ಲಾ ರೀತಿಯಲ್ಲೂ ಸರ್ವಧರ್ಮ ಪ್ರೇಮಿಯಾದ ವಿನಯ್ ಕುಮಾರ್ ಸೊರಕೆಯವರನ್ನು ತೇಜೋವಧೆ ಮಾಡಲು ತೆರೆಮರೆಯ ಮೂಲಕ ಷಡ್ಯಂತ್ರ ನಡೆಸುವ ಕೆಲವೊಂದು ಕೋಮುವಾದಿ ಶಕ್ತಿಗಳು, ಮುಸ್ಲಿಮರು ಸೊರಕೆಯ ವಿರುದ್ಧ ಎಂದು ಬಿಂಬಿಸಹೊರಟಿರುವುದು ಹಾಸ್ಯಾಸ್ಪದ.
ಮಾಜಿ ಮೇಯರ್ ರವರು, ಯಾರದೋ ಆಮಿಷಕ್ಕೆ ಒಳಗಾಗಿ ಪ್ರಾಮಾಣಿಕ ರಾಜಕಾರಣಿ ಸೊರಕೆಯನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸಹೊರಟು, ಅವರ ಅಲ್ಪಜ್ಞಾನ ಏನೆಂದು ಜಗಜ್ಜಾಹೀರುಗೊಳಿಸಿದ್ದಾರೆ. ಒಂದು ವೇಳೆ ಲೋಕಸಭಾ ಚುನಾವಣೆಗೆ ಸೊರಕೆಯವರು ಸ್ಪರ್ಧಿಸುವುದಾದರೆ ಸರ್ವ ಮುಸ್ಲಿಮರೂ ಅಲ್ಪಸಂಖ್ಯಾತರೂ ಸೊರಕೆಯವರಿಗೆ ಬೆಂಬಲ ಸೂಚಿಸಲಿದ್ದಾರೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಉಡುಪಿ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.