ಕಾಸರಗೋಡು,ನ 05 (DaijiworldNews/MS): ದೇವಸ್ಥಾನದಿಂದ ದೇವರ ವಿಗ್ರಹದ ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದ ಅರ್ಚಕನಾದ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ತಿರುವನಂತಪುರಕ್ಕೆ ತೆರಳಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ . ತಿರುವನಂತಪುರ ಮೂಲದ ದೀಪಕ್ ನಂಬೂದಿರಿ ಬಂಧಿತ ಆರೋಪಿ. ಚಿನ್ನಾಭರಣವನ್ನು ಮಾರಾಟ ಮಾಡಿದ್ದು , ಇದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ . ಅಕ್ಟೋಬರ್ 29ರ ಬಳಿಕ ಈ ಕೃತ್ಯ ನಡೆದಿತ್ತು.
ದೇವರ ವಿಗ್ರಹದಿಂದ ಚಿನ್ನಾಭರಣವನ್ನು ಕದ್ದು ನಕಲಿ ಚಿನ್ನಾಭರಣ ತೊಡಿಸಿ ಈತ ಪರಾರಿಯಾಗಿದ್ದನು. ಮಂಜೇಶ್ವರ ಹೊಸಬೆಟ್ಟು ಶ್ರೀಮಂಗೇಶ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿತ್ತು . ಅಕ್ಟೋಬರ್ ೨೭ ರಿಂದ ಈತನನ್ನು ಪೂಜೆ ನೆರವೇರಿಸಲು ನೇಮಿಸಲಾಗಿತ್ತು. 29 ರಂದು ಸಂಜೆ ಪೂಜೆಯ ಬಳಿಕ ಕಾವಲುಗಾರನಲ್ಲಿ ಹೇಳಿ ಹೊಸಂಗಡಿ ಪೇಟೆಗೆಂದು ತೆರಳಿದ್ದ ದೀಪಕ್ ನಂಬೂದಿರಿ ಬಳಿಕ ಮರಳಿ ಬಂದಿರಲಿಲ್ಲ . ದೇವಸ್ಥಾನದ ಮೊಕ್ತೇಸರ ಕರೆ ಮಾಡಿದರೂ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು . ಇದರಿಂದ ಸಿದ್ದಾಪುರದ ಶ್ರೀಧರ ಭಟ್ ಎಂಬವರನ್ನು ಅರ್ಚಕರನ್ನಾಗಿ ನೇಮಿಸಿದ್ದು , ನವಂಬರ್ ಒಂದರಂದು ಪೂಜೆ ನಡೆಸಲೆಂದು ಗರ್ಭಗುಡಿಗೆ ತೆರಳಿದಾಗ ದೇವರ ವಿಗ್ರಹದಲ್ಲಿದ್ದ ಚಿನ್ನಾಭರಣದ ಮೇಲೆ ಸಂಶಯಗೊಂಡು ಮೊಕ್ತೇಸರರಿಗೆ ,ಮಾಹಿತಿ ನೀಡಿದ್ದು , ಪರಿಶೀಲಿಸಿದಾಗ ದೇವರ ವಿಗ್ರಹದಲ್ಲಿ ನಕಲಿ ಚಿನ್ನಾಭರಣ ಅಳವಡಿಸಿರುವುದು ಪತ್ತೆಯಾಗಿತ್ತು. ವಿಗ್ರಹ ದಲ್ಲಿದ್ದ ಎರಡು ಸರ ಸೇರಿದಂತೆ ಐದೂವರೆ ಪವನ್ ನ ಚಿನ್ನಾಭರಣವನ್ನು ಈತ ಕದ್ದು ಪರಾರಿಯಾಗಿದ್ದನು . ಮೊಕ್ತೇಸರ ಎಂ . ದೀಪಕ್ ರಾವ್ ಮಂಜೇಶ್ವರ ಪೊಲೀಸರಿಗೆ ನೀಡಿದ ದೂರಿ ನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.