ಉಡುಪಿ, ನ 04 (DaijiworldNews/SM): ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ನವೆಂಬರ್ 7-8ರಂದು ಕರಾವಳಿ ಪ್ರವಾಸ ಕೈಗೊಳ್ಳಲಿದ್ದು, ಉಡುಪಿಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.
ನ.7ರಂದು ಬೆಳಗ್ಗೆ 10:30ಕ್ಕೆ ಆದಿ ಉಡುಪಿ ಹೆಲಿಪ್ಯಾಡ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸಲಿದ್ದಾರೆ. ಆ ಬಳಿಕ ರಸ್ತೆ ಮೂಲಕ ನೇರವಾಗಿ ಕಾಪುವಿಗೆ ತೆರಳಿ 11 ಗಂಟೆಗೆ ಜನಸಂಕಲ್ಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅಪರಾಹ್ನ 1:50ಕ್ಕೆ ಉಡುಪಿ ಎಂಜಿಎಂ ಕಾಲೇಜಿನಲ್ಲಿ ನಡೆಯುವ ಕರಾವಳಿಯ ಹಿರಿಯ ಪತ್ರಕರ್ತರ ಜನ್ಮಶತಮಾನೋತ್ಸವ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಬಳಿಕ ಅಪರಾಹ್ನ 3:45ಕ್ಕೆ ಕುಂದಾಪುರ ತಾಲೂಕು ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ಉಡುಪಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗುವ ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ನಂತರ ಉಡುಪಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.